
ಪುಣೆ: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ, ಶಸ್ತ್ರಾಸ್ತ್ರಗಳ ಅಕ್ರಮ ತಯಾರಿಕೆ ಹಾಗೂ ಸಾಗಾಟದ ಜಾಲವನ್ನು ಭೇದಿಸಿದ್ದಾರೆ. 36 ಜನರನ್ನು ಬಂಧಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮಾರ್ತಿ ಗ್ರಾಮದಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಈ ಜಾಲವನ್ನು ಪತ್ತೆ ಹಚ್ಚಿದ ಬಳಿಕ, 105 ಮಂದಿ ಪೊಲೀಸ್ ಸಿಬ್ಬಂದಿಯ ತಂಡವು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ, ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ 50 ಘಟಕಗಳನ್ನು ನಾಶಪಡಿಸಲಾಗಿದೆ.
ಕಳೆದ ಮೂರು ವಾರಗಳಲ್ಲಿ ಪುಣೆಯಲ್ಲಿ 21 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಬಂಧಿತರಾದ ಆರೋಪಿಗಳ ವಿಚಾರಣೆಯಲ್ಲಿ, ಮಧ್ಯಪ್ರದೇಶದಿಂದ ಇಲ್ಲಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿದೆ ಎಂಬುದು ಗೊತ್ತಾಯಿತು.
ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.