ADVERTISEMENT

ಗೋಡೆ ಕುಸಿದು 15 ಮಂದಿ ಸಾವು

ಮಹಾರಾಷ್ಟ್ರ: ಭಾರಿ ಮಳೆ ತಂದ ಅವಘಡ l ಕೂಲಿಗೆ ಬಂದು ಹೆಣವಾದರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 18:53 IST
Last Updated 29 ಜೂನ್ 2019, 18:53 IST
ಕಟ್ಟಡ ಕಾರ್ಮಿಕರ ತಾತ್ಕಾಲಿಕ ಶೆಡ್‌ ಮೇಲೆ ಕುಸಿದ ಗೋಡೆ. ಕಟ್ಟಡದ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳೂ ಉರುಳಿವೆ -  –-ಪಿಟಿಐ ಚಿತ್ರ
ಕಟ್ಟಡ ಕಾರ್ಮಿಕರ ತಾತ್ಕಾಲಿಕ ಶೆಡ್‌ ಮೇಲೆ ಕುಸಿದ ಗೋಡೆ. ಕಟ್ಟಡದ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳೂ ಉರುಳಿವೆ -  –-ಪಿಟಿಐ ಚಿತ್ರ   

ಪುಣೆ (ಪಿಟಿಐ): ಇಲ್ಲಿನ ಕೊಂಧ್ವಾ ಪ್ರದೇಶದಲ್ಲಿನ ವಸತಿ ಸಮುಚ್ಚಯದ ಗೋಡೆ ಶನಿವಾರ ಕುಸಿದು 15 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರಿಗಾಗಿ ಈ ಗೋಡೆ ಪಕ್ಕದಲ್ಲೇ ಗುಡಿಸಲುಗಳನ್ನು ನಿರ್ಮಿಸಿಕೊಡಲಾಗಿತ್ತು. ಮಧ್ಯರಾತ್ರಿ ಗೋಡೆ ನೆಲಕ್ಕುರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಮಳೆ ಸುರಿಯುತ್ತಿದ್ದುದರಿಂದ ಮಣ್ಣು ಸಡಿಲವಾಗಿರುವ ಸಾಧ್ಯತೆ ಇದೆ. ಇದರಿಂದಾಗಿಯೇ ಗೋಡೆ ಕುಸಿದಿದೆ. ಗೋಡೆ ಪಕ್ಕದಲ್ಲಿ ಸಾಕಷ್ಟು ಮಣ್ಣನ್ನು ಬೇಕಾಬಿಟ್ಟಿ ತೆಗೆಯಲಾಗಿತ್ತು ಎಂದು ಪುಣೆ ಪಾಲಿಕೆ ಆಯುಕ್ತ ಸೌರಭ್‌ ರಾವ್‌ ಹೇಳಿದ್ದಾರೆ.

ADVERTISEMENT

ಮೃತರು ಬಿಹಾರ ಮತ್ತು ಉತ್ತರ ಪ್ರದೇಶದವರು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆಯಲ್ಲಿ ಶುಕ್ರವಾರ 73.1 ಮಿಲಿ ಮೀಟರ್‌ ಮಳೆಯಾಗಿದೆ. ಇದು 2010 ರಿಂದ ಜೂನ್ ತಿಂಗಳಲ್ಲಿ ಬಿದ್ದ ಎರಡನೇ ಅತಿ ಹೆಚ್ಚು ಮಳೆಯಾಗಿ ದಾಖಲಾಗಿದೆ.

12 ರಿಂದ 15 ಅಡಿ ಎತ್ತರದ ಗೋಡೆ ಮಧ್ಯರಾತ್ರಿ 1.30 ರಿಂದ 1.45 ರ ವೇಳೆಯಲ್ಲಿ ಕುಸಿದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ಅಗ್ನಿಶಾಮಕ ದಳ ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯನ್ನು(ಎನ್‌ಡಿಆರ್‌ಎಫ್‌)ದುರ್ಘಟನೆ ನಡೆದ ಸ್ಥಳಕ್ಕೆ ಕಳುಹಿಸಲಾಗಿತ್ತು.

ಮೃತರಲ್ಲಿ ಒಂಬತ್ತು ಪುರುಷರು, ಇಬ್ವರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ. ಮೂವರಿಗೆ ಗಾಯಗಳಾಗಿವೆ ಎಂದು ಕೊಂಧ್ವಾ ಪೊಲೀಸ್‌ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರ ಬಂಧನ: ವಸತಿ ಸಮುಚ್ಚಯದ ಬಿಲ್ಡರ್‌ಗಳಾದ ವಿಪುಲ್‌ ಅಗರ್‌ವಾಲ್‌ ಮತ್ತು ವಿವೇಕ್‌ ಅಗರ್‌ವಾಲ್‌ ಅವರನ್ನು ಬಂಧಿಸಲಾಗಿದೆ.

ಎರಡನೇ ದಿನವೂ ಮಳೆ(ಮುಂಬೈ- ಪಿಟಿಐ): ಮುಂಬೈ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಎರಡನೇ ದಿನವಾದ ಶನಿವಾರವೂ ಭಾರಿ ಮಳೆ ಸುರಿದಿದೆ.

ಆದರೆ ನಗರದಲ್ಲಿ ಮಳೆಯಿಂದಾಗಿ ಸಾಮಾನ್ಯ ಜನಜೀವನಕ್ಕೆ ಅಷ್ಟೇನೂ ತೊಂದರೆಯಾಗಿಲ್ಲ. ಮಳೆ ಸಂಬಂಧ ಘಟನೆಗಳಲ್ಲಿ ಐವರು ಗಾಯಗೊಂಡಿದ್ದಾರೆ.

ಭಾರಿ ಮಳೆ ಕುರಿತು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿರುವ ಕಾರಣ ಕೇಂದ್ರ ರೈಲ್ವೆಯು ಕೆಲವು ಪ್ರಯಾಣಿಕರ ರೈಲುಗಳನ್ನು ರದ್ದುಪಡಿಸಿದೆ. ಇವುಗಳು ಮುಂಬೈ ಮತ್ತು ಪುಣೆ ನಡುವೆ ಸಂಚರಿಸುತ್ತವೆ.

ಬೃಹನ್‌ ಮುಂಬೈ ಪಾಲಿಕೆ ಅಧಿಕಾರಿಗಳ ಪ್ರಕಾರ, ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನ 39 ಪ್ರಕರಣ ವರದಿಯಾಗಿವೆ. 104 ಮರಗಳು ಬುಡಮೇಲಾಗಿವೆ.

ತನಿಖೆಗೆ ಆದೇಶ

ಮುಂಬೈ (ಪಿಟಿಐ): ಪುಣೆಯಲ್ಲಿನ ಗೋಡೆ ಕುಸಿತ ಅವಘಡದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ತನಿಖೆಗೆ ಆದೇಶಿಸಿದ್ದಾರೆ.

‘ಇದೊಂದು ತೀರಾ ದುಃಖದ ಸಂಗತಿ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಪುಣೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಸ್ತೃತವಾದ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.