ಅಪಘಾತದ ದೃಶ್ಯ
– ಪಿಟಿಐ ಚಿತ್ರ
ಮುಂಬೈ: ಪುಣೆ ಜಿಲ್ಲೆಯ ಜೆಜುರಿ–ಮೊರ್ಗನ್ ರಸ್ತೆಯಲ್ಲಿ ಕಾರು ಹಾಗೂ ಪಿಕ್‌ಅಪ್ ಡಿಕ್ಕಿಯಾಗಿ ಆರು ವರ್ಷದ ಮಗು ಸಹಿತ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಘಟನೆ ನಡೆದಿದೆ.
ಪುಣೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿರ್ಲೋಸ್ಕರ್ ಕಂಪನಿ ಸಮೀಪ ಇರುವ ಶ್ರೀರಾಮ್ ಢಾಬಾದ ಮುಂಭಾಗದಲ್ಲಿ ಘಟನೆ ನಡೆದಿದೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ‘ಪುಣೆಯ ಜೆಜುರಿ–ಮೊರ್ಗನ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಜೀವಹಾನಿಯಾಗಿರುವುದಕ್ಕೆ ತೀವ್ರ ದುಃಖಿತನಾಗಿದ್ದೇನೆ. ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.
ಕಾರು ಜೆಜುರಿಯಿಂದ ಬಾರಾಮತಿ ಕಡೆಗೆ ಸಂಚರಿಸುತ್ತಿತ್ತು.
ಹೋಟೆಲ್ ಮಾಲೀಕ ಹಾಗೂ ಅವರ ಸಿಬ್ಬಂದಿ ಪಿಕ್‌ಅಪ್‌ನಿಂದ ಫ್ರಿಡ್ಜ್ ಕೆಳಗಿಳಿಸುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ರಭಸಕ್ಕೆ ಹತ್ತಿರದಲ್ಲಿ ನಿಲ್ಲಿಸಿದ್ದ ಮತ್ತೊಂದು ವಾಹನಕ್ಕೂ ಕಾರು ಡಿಕ್ಕಿ ಹೊಡೆದಿದೆ.
ಪುರಂದರ್‌ನ ನಜರೆ ಮೂಲದ ಸೋಮನಾಥ ರಾಮಚಂದ್ರ ವೇಸೆ ಮತ್ತು ರಾಮು ಸಂಜೀವನ್ ಯಾದವ್, ಉತ್ತರ ಪ್ರದೇಶದ ಕುಶಿನಗರದ ಅಜಯ್‌ಕುಮಾರ್ ಚವಾಣ್, ಭೋರ್‌ನ ಕಂಜಲೆಯ ಅಜಿತ್ ಅಶೋಕ್ ಜಾಧವ್, ಇಂದಾಪುರದ ಪವಾರ್‌ವಾಡಿಯ ಕಿರಣ್ ಭರತ್ ರಾವತ್, ಸೋಲಾಪುರದ ನಂಗ್ನಾಪುರದ ಅಶ್ವಿನಿ ಸಂತೋಷ್ ಐಸರ್, ಬಾರಾಮತಿಯ ಝರ್ಗದ್‌ವೈನ ಅಕ್ಷಯ್ ಶಂಕರ್ ರಾವತ್, ಆರು ವರ್ಷದ ಮಗು ಸಾರ್ಥಕ್ ಕಿರಣ್ ರಾವತ್, ಮತ್ತೊಬ್ಬ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಘಟನೆಯ ಸಮಯದಲ್ಲಿ ಕಿರಣ್, ಅಕ್ಷಯ್ ಮತ್ತು ಅಶ್ವಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಒಬ್ಬರಾದ ವೇಸೆ, ಪಿಕಪ್ ಟ್ರಕ್ ನಿಲ್ಲಿಸಿದ್ದ ಹೋಟೆಲ್‌ನ ಮಾಲೀಕ.
‘ಫ್ರಿಡ್ಜ್ ಅನ್ನು ಹೊರತೆಗೆಯುತ್ತಿದ್ದಾಗ, ಆರು ಜನರಿದ್ದ ಕಾರು ವೇಗವಾಗಿ ಬಂದು ಪಿಕ್-ಅಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ‘ ಎಂದು ಪುಣೆ ಗ್ರಾಮೀಣ ಉಪ ಪೊಲೀಸ್ ವರಿಷ್ಠಾಧಿಕಾರಿ ತಾನಾಜಿ ಬರಾಡೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.