ಬಂಧನ
(ಸಾಂದರ್ಭಿಕ ಚಿತ್ರ)
ಚಂಡೀಗಢ: ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಬಳಿ ಗ್ರೆನೇಡ್ ಸ್ಫೋಟ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಇಂದು (ಶನಿವಾರ) ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹ ನಿವಾಸಿ ಸೈದುಲ್ ಅಮೀನ್ ಬಂಧಿತ ಆರೋಪಿ. ಕೇಂದ್ರ ತನಿಖಾ ಸಂಸ್ಥೆ ಹಾಗೂ ದೆಹಲಿ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.
ಏಪ್ರಿಲ್ 7ರಂದು ಮನೋರಂಜನ್ ಕಾಲಿಯಾ ಅವರ ಜಲಂಧರ್ ನಿವಾಸದ ಬಳಿ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಗಾಯವಾಗಿರಲಿಲ್ಲ.
ಕಾಲಿಯಾ ಅವರ ನಿವಾಸದ ಮೇಲೆ ಗ್ರೆನೇಡ್ ದಾಳಿ ಪ್ರಕರಣದಲ್ಲಿ ಸೈದುಲ್ ಅಮೀನ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಪ್ರಗತಿಯಲ್ಲಿದೆ. ವಿದೇಶಿ ಸಂಪರ್ಕ, ಹಣಕಾಸಿನ ಬೆಂಬಲ ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಪಂಜಾಬ್‌ನಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಲಾರೆನ್ಸ್ ಬಿಷ್ಣೋಯಿ ತಂಡ ಈ ಕೃತ್ಯಕ್ಕೆ ಸಂಚು ರೂಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಇ-ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.