ADVERTISEMENT

25,000 ಉದ್ಯೋಗ ಭರ್ತಿ: ಮೊದಲ ಸಂಪುಟ ಸಭೆ ಬಳಿಕ ಪಂಜಾಬ್ ಸಿಎಂ ಘೋಷಣೆ

ಪಿಟಿಐ
Published 19 ಮಾರ್ಚ್ 2022, 14:52 IST
Last Updated 19 ಮಾರ್ಚ್ 2022, 14:52 IST
ಪಂಜಾಬ್ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್: ಪಿಟಿಐ ಚಿತ್ರ
ಪಂಜಾಬ್ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್: ಪಿಟಿಐ ಚಿತ್ರ   

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ತಮ್ಮ ಮೊದಲ ಸಂಪುಟ ಸಭೆಯಲ್ಲೇ 10,000 ಪೊಲೀಸ್ ಹುದ್ದೆಗಳು ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿನ 25,000 ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದಾರೆ.

ಮೊದಲ ಸಂಪುಟ ಸಭೆಯ ನಂತರ ವಿಡಿಯೊ ಸಂದೇಶದಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಒಂದು ತಿಂಗಳೊಳಗೆ ಈ ಉದ್ಯೋಗಗಳಿಗೆ ಜಾಹೀರಾತು ಮತ್ತು ಅಧಿಸೂಚನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ADVERTISEMENT

‘ಮುಂದಿನ ದಿನಗಳಲ್ಲಿ, ನಾವು ನಮ್ಮ ಉಳಿದ ಚುನಾವಣೆ ಭರವಸೆಗಳನ್ನು ಪೂರೈಸುತ್ತೇವೆ’ಎಂದು ಅವರು ಹೇಳಿದ್ದಾರೆ.

ಪಂಜಾಬ್ ಪೊಲೀಸ್‌ ಇಲಾಖೆಯಲ್ಲಿ 10,000 ಉದ್ಯೋಗ ಭರ್ತಿ ಮಾಡಲಾಗುವುದು ಮತ್ತು ಉಳಿದವುಗಳನ್ನು ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಅರ್ಹತೆಯ ಮೇರೆಗೆ ಉದ್ಯೋಗ ನೀಡಲಾಗುವುದು. ಯಾವುದೇ ತಾರತಮ್ಯವಿಲ್ಲ, ಶಿಫಾರಸು ಮತ್ತು ಲಂಚಕ್ಕೆ ಆಸ್ಪದವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಐತಿಹಾಸಿಕ ನಿರ್ಧಾರವು ಯುವಕರಿಗೆ ಪಾರದರ್ಶಕ ಮತ್ತು ಅರ್ಹತೆ ಆಧಾರಿತ ಕಾರ್ಯವಿಧಾನದ ಮೂಲಕ ಸರ್ಕಾರಿ ವಲಯದಲ್ಲಿ ಉದ್ಯೋಗಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಪ್ರಸ್ತಾಪಿಸಿದ್ದ ರಾಜ್ಯದ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗವು ಒಂದು. ಪಕ್ಷ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲಿ ಉದ್ಯೋಗನೀಡುವ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.