ಹೋಶಿಯಾರ್‌ಪುರ (ಪಂಜಾಬ್): ಮಾದಕವಸ್ತು ಕಳ್ಳಸಾಗಣೆ ಜಾಲದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಇಲ್ಲಿನ ದಿನೋವಾಲ್ ಖುರ್ದ್ ಗ್ರಾಮದಲ್ಲಿ 9 ಕುಟುಂಬಗಳಿಗೆ ಸೇರಿದ 5 ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಹೋಶಿಯಾರ್‌ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮಲ್ಲಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಂಜಾಬ್ ಸರ್ಕಾರವು ಮಾದಕವಸ್ತು ನಿಯಂತ್ರಣ ಅಭಿಯಾನ ಆರಂಭಿಸಿದೆ. ಕಾರ್ಯಾಚರಣೆ ವೇಳೆ ದಿನೋವಾಲ್ ಖುರ್ದ್ ಗ್ರಾಮವನ್ನು ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿರುವ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.
ಇದೇ ಗ್ರಾಮದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ 13 ಕುಟುಂಬಗಳಿದ್ದು, ಕುಟುಂಬದ ಸದಸ್ಯರ ವಿರುದ್ಧ ಸರಿ ಸುಮಾರು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಮಾದಕ ವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ್ದಾಗಿವೆ ಎಂದು ಸಂದೀಪ್ ತಿಳಿಸಿದ್ದಾರೆ.
ಅಲ್ಲದೇ, ಈ ಕುಟುಂಬಗಳು ಪಂಚಾಯತಿಗೆ ಸೇರಿದ 13 ಮರಲಾ (3539.26 ಚದರ ಅಡಿ) ಜಮೀನನ್ನು ಅತಿಕ್ರಮಿಸಿ, ಮನೆಗಳನ್ನು ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಕಾರಣ ಆಡಳಿತಾಧಿಕಾರಿಗಳು ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದೂ ಸಂದೀಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.