ADVERTISEMENT

ಪ್ರವಾಹದಿಂದ ಪಂಜಾಬ್ ತತ್ತರ: ರಕ್ಷಣಾ ಕಾರ್ಯಕ್ಕಿಳಿದ ಭಾರತ ತಂಡದ ಹಾಕಿ ಆಟಗಾರರು

ಪಿಟಿಐ
Published 5 ಸೆಪ್ಟೆಂಬರ್ 2025, 13:23 IST
Last Updated 5 ಸೆಪ್ಟೆಂಬರ್ 2025, 13:23 IST
<div class="paragraphs"><p>ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ತಂಡದಲ್ಲಿ ಹಾಕಿ ಆಟಗಾರ ರೂಪೀಂದರ್ ಸಿಂಗ್ ಪಾಲ್</p></div>

ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ತಂಡದಲ್ಲಿ ಹಾಕಿ ಆಟಗಾರ ರೂಪೀಂದರ್ ಸಿಂಗ್ ಪಾಲ್

   

ಎಕ್ಸ್ ಚಿತ್ರ

ನವದೆಹಲಿ: ಪ್ರವಾಹದಿಂದ ತತ್ತರಿಸಿರುವ ಪಂಜಾಬ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಹಾಕಿ ತಂಡದ ಆಟಗಾರರಾದ ರೂಪೀಂದರ್ ಪಾಲ್ ಸಿಂಗ್, ಗುರುವಿಂದರ್ ಸಿಂಗ್ ಚಾಂಡಿ ಮತ್ತು ಮಾಜಿ ಆಟಗಾರ ಜುಗರಾಜ್ ಸಿಂಗ್ ಅವರು ಧುಮುಕಿದ್ದಾರೆ.

ADVERTISEMENT

ರಾಜ್ಯದ 23 ಜಿಲ್ಲೆಗಳ 1900ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಈವರೆಗೂ 40 ಜನ ಮೃತಪಟ್ಟು 3.5 ಲಕ್ಷಕ್ಕೂ ಅಧಿಕ ಮಂದಿ ಬಾಧಿತರಾಗಿದ್ದಾರೆ.

ಡ್ರಾಗ್ ಫ್ಲಿಕರ್‌ ಜುಗರಾಜ್ ಸಿಂಗ್‌ ಮತ್ತು ರುಪೀಂದರ್ ಪಾಲ್ ಸಿಂಗ್ ಮತ್ತು ಫಾರ್ವರ್ಡ್‌ ಆಟಗಾರ ಗುರುವಿಂದರ್ ಸಿಂಗ್ ಚಾಂಡಿ ಅವರು ಗುರುದಾಸಪುರದಲ್ಲಿ ಪ್ರವಾಹ ಸಂತ್ರಸ್ತರ ನೆರವಿಗಾಗಿ ಅಖಾಡಕ್ಕೆ ಇಳಿದಿದ್ದಾರೆ.

‘ಪ್ರವಾಹಪೀಡಿತ ಪ್ರದೇಶಗಳಲ್ಲಿ ಗಡಿ ಭದ್ರತಾ ಪಡೆ, ಸೇನೆ, ಪೊಲೀಸ್, ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಜತೆಗೂಡಿ ಯುದ್ಧೋಪಾದಿಯಲ್ಲಿ ಕೆಲಸ ಆರಂಭಿಸಿವೆ. ಮೊದಲು ರಕ್ಷಣೆ, ನಂತರ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳ ವಿತರಣೆ. ಸಾಂಕ್ರಾಮಿಕ ರೋಗ ಹರಡದಂತೆ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ವೈದ್ಯರು ಹಾಗೂ ಸ್ವಯಂಸೇವಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಜುಗರಾಜ್ ಹೇಳಿದ್ದಾರೆ.

‘ಕ್ರೀಡಾಂಗಣದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಇಲ್ಲಿ ನೆರವಾಗುತ್ತಿದೆ. ಕ್ರೀಡಾಪಟುವಾಗಿ ನಾವು ಸಾಕಷ್ಟು ಏರಿಳಿತವನ್ನು ಕಂಡಿರುತ್ತೇವೆ. ಇದು ನಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರನ್ನಾಗಿಸಿರುತ್ತದೆ. ಸಮಾಜದ ಇಂಥ ಸಂಕಷ್ಟದ ಸಮಯದಲ್ಲಿ ಅವೆಲ್ಲವೂ ನೆರವಾಗುತ್ತವೆ’ ಎಂದಿದ್ದಾರೆ.

ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಕಾರ್ನರ್‌ ತಜ್ಞ ರೂಪೀಂದರ್ ಪಾಲ್‌ ಅವರೂ ಈಗ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ. 26ರಂದು ಸಂಭವಿಸಿದ ಪ್ರವಾಹದಲ್ಲಿ ಸಿಲುಕಿದ್ದ ದೀನಾನಗರ ಜಿಲ್ಲೆಯ ಸುಮಾರು 1500ಕ್ಕೂ ಹೆಚ್ಚು ಜನರ ರಕ್ಷಣಾ ಕಾರ್ಯ ಕೈಗೊಂಡ ತಂಡದಲ್ಲಿ ಇವರು ಇದ್ದರು.

ಆರಂಭದಲ್ಲಿ ರೂಪಿಂದರ್ ಈ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದು ಬಹುತೇಕರಿಗೆ ತಿಳಿದಿರಲಿಲ್ಲ. ಆದರೆ ನಂತರದಲ್ಲಿ ಈ ಮಾಹಿತಿ ಪಡೆದ ಯುವಕರು ತಂಡೋಪತಂಡವಾಗಿ ಬಂದು ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದು ಅಲ್ಲಿನ ಕೆಲವರು ತಿಳಿಸಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಸಹಿತ ಭಾರತ ಪರ 97 ಪಂದ್ಯಗಳನ್ನು ಆಡಿರುವ ಗುರುವಿಂದರ್ ಸಿಂಗ್ ಚಾಂಡಿ ಕೂಡಾ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 

‘ಕೊಟ್ಲಾ ಮುಗಾಲಾದಲ್ಲಿ ಹಿರಿಯ ಮಹಿಳೆಯೊಬ್ಬರಿಗೆ ಹಾವು ಕಡಿದಿತ್ತು. ಅವರನ್ನು ವೈದ್ಯರ ಬಳಿ ಕರೆದೊಯ್ದೆ. ಗ್ರಾಮವೊಂದರಲ್ಲಿ ಮದುವೆ ಆಯೋಜನೆಗೊಂಡಿತ್ತು. ಯುವತಿಯನ್ನು ಕರೆದೊಯ್ಯುವ ಹಾಗೂ ಮತ್ತೊಂದೆಡೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಗಳು ಸವಾಲಿನದ್ದಾಗಿದ್ದವು’ ಎಂದು ಚಾಂಡಿ ಹೇಳಿದ್ದಾರೆ.

‘ಪ್ರವಾಹಕ್ಕೆ ಸಿಲುಕಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಜಮೀನನ್ನು ಮತ್ತೆ ಉಳುಮೆಗೆ ಯೋಗ್ಯವಾಗಿಸಲು ಬಡ ರೈತರಿಗೆ 2ರಿಂದ 3 ವರ್ಷಗಳೇ ಬೇಕು. ಮನೆ ಕಳೆದುಕೊಂಡವರ ಪುನರ್ವಸತಿಯೂ ತ್ರಾಸದಾಯಕ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.