
ಮೃತ ಬಾಲಕಿ ಮಾನ್ವಿ
ಚಿತ್ರಕೃಪೆ: ಎಕ್ಸ್– @PCSurveysIndia
ಪಟಿಯಾಲ: ತನ್ನ ಹುಟ್ಟುಹಬ್ಬದಂದು ಕೇಕ್ ತಿಂದಿದ್ದ 10 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಈಚೆಗೆ ಇಲ್ಲಿ ನಡೆದಿದೆ. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಕೇಕ್ ಅಂಗಡಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೃತ ಬಾಲಕಿಯ ತಾಯಿ ದಾಖಲಿಸಿರುವ ದೂರಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 273 (ವಿಷಕಾರಿ ಆಹಾರ ಅಥವಾ ಪಾನೀಯ ಮಾರಾಟ) ಮತ್ತು 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿ ದೂರು ದಾಖಲಿಸಲಾಗಿದೆ. ಬಾಲಕಿಯ ದೇಹದ ಜೀರ್ಣಾಂಗ ವ್ಯವಸ್ಥೆಯ ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಕನ್ನು ಮಾರ್ಚ್ 24ರಂದು ಆನ್‌ಲೈನ್ ಮೂಲಕ ತರಿಸಲಾಗಿತ್ತು. ಕೇಕು ತಿಂದ ಕೆಲಹೊತ್ತಿನಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ತಮ್ಮ ಮಗಳು ಮರುದಿನ ಬೆಳಿಗ್ಗೆ ಮೃತಪಟ್ಟಳು ಎಂದು ತಾಯಿಯು ದೂರಿನಲ್ಲಿ ಹೇಳಿದ್ದರು.
‘ಬಾಲಕಿಯ ಕುಟುಂಬದ ಸದಸ್ಯರು ಗುರುವಾರ ನನ್ನನ್ನು ಭೇಟಿಯಾಗಿದ್ದರು. ಪೊಲೀಸ್ ಮತ್ತು ಆರೋಗ್ಯ ಇಲಾಖೆಯಲ್ಲಿ ದೂರು ದಾಖಲಿಸುವಂತೆ ಅವರಿಗೆ ಹೇಳಿದ್ದೆ. ಅವರ ಮನೆಗೆ ಹೋಗಿ ಕೇಕ್‌ನ ಮಾದರಿಗಳನ್ನು ಸಂಗ್ರಹಿಸುವಂತೆ ಆಹಾರ ತಪಾಸಣೆ ತಂಡಕ್ಕೆ ಸೂಚಿಸಿದ್ದೇನೆ’ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.