ನವದೆಹಲಿ: ಜಮ್ಮು ಮತ್ತು ಪಂಜಾಬ್‌ನಲ್ಲಿನ ಪ್ರವಾಹದಿಂದಾಗಿ ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿ (ಐಬಿ) ಬೇಲಿಯ 110 ಕಿ.ಮೀ.ಗೂ ಹೆಚ್ಚು ಪ್ರದೇಶ ಹಾನಿಗೊಳಗಾಗಿದ್ದು, ಸುಮಾರು 90 ಬಿಎಸ್‌ಎಫ್ ಪೋಸ್ಟ್‌ಗಳು ಜಲಾವೃತವಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಶ್ಚಿಮದ 2,289 ಕಿ.ಮೀ. ಅಂತರರಾಷ್ಟ್ರೀಯ ಗಡಿ ಪೈಕಿ ಜಮ್ಮುವಿನಲ್ಲಿ ಸುಮಾರು 192 ಕಿ.ಮೀ. ಮತ್ತು ಪಂಜಾಬ್‌ನಲ್ಲಿ 553 ಕಿ.ಮೀ. ಅಂತರರಾಷ್ಟ್ರೀಯ ಗಡಿ ಇದೆ.
ಪಂಜಾಬ್‌ನಲ್ಲಿ ಸುಮಾರು 80 ಕಿ.ಮೀ. ಮತ್ತು ಜಮ್ಮುವಿನಲ್ಲಿ ಸುಮಾರು 30 ಕಿ.ಮೀ. ಗಡಿ ಬೇಲಿಯು ಪ್ರವಾಹದಿಂದ ಹಾನಿಗೊಳಗಾಗಿದೆ. ಈ ಸ್ಥಳಗಳಲ್ಲಿನ ಬೇಲಿ ಮುಳುಗಿ, ಕೆಲವೆಡೆ ಬುಡ ಸಹಿತ ಕಿತ್ತುಹೋಗಿದೆ. ಮತ್ತೆ ಕೆಲವೆಡೆ, ಓರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನಲ್ಲಿ ಸುಮಾರು 20 ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪೋಸ್ಟ್‌ಗಳು ಮತ್ತು ಪಂಜಾಬ್‌ನಲ್ಲಿ 65-67 ಪೋಸ್ಟ್‌ಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಅಥವಾ ಮುಳುಗಿವೆ, ಹಲವು ರಕ್ಷಣಾ ಕೇಂದ್ರಗಳು (ಎಫ್‌ಡಿಪಿಗಳು) ಅಥವಾ ಪಡೆಯ ವೀಕ್ಷಣಾ ಪೋಸ್ಟ್‌ಗಳು ಸಹ ಜಲಾವೃತಗೊಂಡಿವೆ.
ಈ ಎರಡು ಪ್ರದೇಶಗಳಲ್ಲಿ ಬೇಲಿ ಮತ್ತು ಗಡಿ ಹೊರಠಾಣೆಗಳನ್ನು (ಬಿಒಪಿಗಳು) ಪುನಃಸ್ಥಾಪಿಸಲು ಸೇನಾ ಪಡೆ ಈಗ ಮೆಗಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ಡ್ರೋನ್ ಕಣ್ಗಾವಲು, ದೊಡ್ಡ ಸರ್ಚ್‌ಲೈಟ್‌ಗಳ ಬಳಕೆ, ದೋಣಿ ಗಸ್ತು ಮತ್ತು ಎಲೆಕ್ಟ್ರಾನಿಕ್ ಮೇಲ್ವಿಚಾರಣೆಯ ಮೂಲಕ ಸುರಕ್ಷಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
1988ರ ನಂತರ ಪಂಜಾಬ್ ಭೀಕರ ಪ್ರವಾಹವನ್ನು ಎದುರಿಸುತ್ತಿದೆ. ಜಮ್ಮುವಿನಲ್ಲಿ ದಾಖಲೆಯ ಮಳೆ ಆಗಿದ್ದು, ಸೂರ್ಯ ಪುತ್ರಿ ಎಂದು ಕರೆಯಲ್ಪಡುವ ತಾವಿ ನದಿಯು ನೂರಾರು ಮನೆಗಳು ಮತ್ತು ಹಲವಾರು ಹೆಕ್ಟೇರ್ ಕೃಷಿಭೂಮಿಯನ್ನು ಮುಳುಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.