ಭಗವಂತ್ ಮಾನ್
–ಪಿಟಿಐ ಚಿತ್ರ
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರ ಹಾಗೂ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಶುಕ್ರವಾರ ನಡೆದ ವಿಶೇಷ ಅಧಿವೇಶನ ಸಾಕ್ಷಿಯಾಯಿತು.
ಅಧಿವೇಶನದಲ್ಲಿ ಪ್ರಸ್ತಾವಿತ ಮೂರು ಮಸೂದೆಗಳನ್ನು ಮಂಡಿಸದಂತೆ ರಾಜ್ಯಪಾಲರು, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಮಾನ್, ಕಲಾಪದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ಮಸೂದೆಗಳನ್ನು ತಡೆಹಿಡಿಯುವಂತೆ ರಾಜ್ಯಪಾಲರು ಹೇಳಿದ್ದಾರೆ. ಒಂದು ವೇಳೆ ಮಂಡಿಸಿದರೂ ಅಂಕಿತ ಹಾಕುವುದಿಲ್ಲ ಎಂದಿದ್ದಾರೆ. ಅವರ ನಡೆ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಾಗುವುದು’ ಎಂದು ಘೋಷಿಸಿದರು.
ಕಲಾಪ ಮುಂದೂಡಿಕೆ: ಮೊದಲ ದಿನದ ಕಲಾಪ ಶುರುವಾದ ವೇಳೆ ಮಾತನಾಡಿದ ಮಾನ್, ‘ಸರ್ಕಾರವು ಸದನದಲ್ಲಿ ಯಾವುದೇ ಮಸೂದೆ ಮಂಡಿಸಲು ಇಚ್ಛಿಸುವುದಿಲ್ಲ. ಹಾಗಾಗಿ, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕು’ ಎಂದು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್‌ಗೆ ಕೋರಿದರು.
‘ರಾಜ್ಯಪಾಲರ ಜತೆ ನಾನು ಸಂಘರ್ಷ ಮುಂದುವರಿಸಲು ಇಚ್ಛಿಸುವುದಿಲ್ಲ. ಸದನದಲ್ಲಿ ಮಂಡಿಸುವ ಮಸೂದೆಗಳಿಗೆ ಅಂಕಿತ ಹಾಕುವುದಾಗಿ ರಾಜ್ಯಪಾಲರು ಹೇಳಬೇಕು. ಜತೆಗೆ, ಕಲಾಪವು ಕಾನೂನುಬದ್ಧವಾಗಿದೆ ಎಂದು ಪ್ರಕಟಿಸುವವರೆಗೂ ಸದನದಲ್ಲಿ ಮಸೂದೆ ಮಂಡಿಸುವುದಿಲ್ಲ’ ಎಂದು ಹೇಳಿದರು.
ಮಾನ್ ಅವರ ಕೋರಿಕೆ ಮೇರೆಗೆ ಕಲಾಪವನ್ನು ಮುಂದೂಡುವ ಬಗ್ಗೆ ನಿರ್ಣಯ ಮಂಡಿಸಲಾಯಿತು. ಇದಕ್ಕೆ ಸದನವು ಒಪ್ಪಿಗೆ ನೀಡಿದ ಬಳಿಕ ಸ್ಪೀಕರ್, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಪತ್ರದಲ್ಲಿ ಏನಿದೆ?: ಗುರುವಾರ ಸರ್ಕಾರಕ್ಕೆ ಪತ್ರ ಬರೆದಿದ್ದ ರಾಜ್ಯಪಾಲ ಪುರೋಹಿತ್, ‘ವಿಶೇಷ ಅಧಿವೇಶನಕ್ಕೆ ಬದಲಾಗಿ ಚಳಿಗಾಲದ ಅಧಿವೇಶನ ಕರೆಯುವುದು ಉತ್ತಮ’ ಎಂದು ಸಲಹೆ ನೀಡಿದ್ದರು.
ಸರ್ಕಾರ ಕಾನೂನುಬಾಹಿರವಾಗಿ ಅಧಿವೇಶನ ನಡೆಸಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಬಗ್ಗೆ ರಾಷ್ಟ್ರಪತಿ ಅವರಿಗೆ ವರದಿ ಮಾಡಲಾಗುವುದು ಎಂದು ಉಲ್ಲೇಖಿಸಿದ್ದರು.
ಶುಕ್ರವಾರ ಮತ್ತು ಶನಿವಾರ ಕರೆದಿರುವ ಅಧಿವೇಶನವು ಬಜೆಟ್ ಕಲಾಪದ ಮುಂದುವರಿದ ಭಾಗವೆಂದು ಸರ್ಕಾರ ಬಿಂಬಿಸುತ್ತಿದೆ. ಆದರೆ, ಇದು ಕಾನೂನುಬಾಹಿರವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.