ADVERTISEMENT

ಪಂಜಾಬ್ ಚುನಾವಣೆ: ಅಮರಿಂದರ್ ಸಿಂಗ್- ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ

ಪಿಟಿಐ
Published 7 ಡಿಸೆಂಬರ್ 2021, 15:47 IST
Last Updated 7 ಡಿಸೆಂಬರ್ 2021, 15:47 IST
ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್   

ಚಂಡೀಗಡ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಬಿಜೆಪಿ ನಾಯಕ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಂಗಳವಾರ ಭೇಟಿ ಮಾಡಿ, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸೀಟು-ಹಂಚಿಕೆ ಕುರಿತಂತೆ ಚರ್ಚಿಸಿದರು.

ಪಂಜಾಬ್ ಚುನಾವಣೆಯ ಉಸ್ತುವಾರಿ ಹೊತ್ತಿರುವ ಶೇಖಾವತ್, ಅಮರಿಂದರ್ ಸಿಂಗ್ ಅವರೊಂದಿಗೆ ಮೊಹಾಲಿಯ ಸಿಸ್ವಾನ್ ಫಾರ್ಮ್ ಹೌಸ್‌ನಲ್ಲಿ ಸಭೆ ನಡೆಸಿದರು.

'ಕೇಂದ್ರ ಸಚಿವ ಮತ್ತು ಪಂಜಾಬ್ ಚುನಾವಣೆ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ನನ್ನ ನಿವಾಸದಲ್ಲಿ ಭೇಟಿ ಮಾಡಿದೆ' ಎಂದು ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್, ಶೇಖಾವತ್ ಅವರೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಶೇಖಾವತ್ ಕೂಡ ಟ್ವೀಟ್ ಮಾಡಿದ್ದು, 'ಕ್ಯಾಪ್ಟನ್ ಅಮರಿಂದರ್ ಜಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ಈ ವೇಳೆ ಪಂಜಾಬ್‌ನಲ್ಲಿನ ರಾಜಕೀಯ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.

ಉಭಯ ನಾಯಕರ ನಡುವೆ ಗಂಟೆಗೂ ಅಧಿಕ ಕಾಲ ಸಭೆ ನಡೆದಿದೆ ಮತ್ತು ವಿಧಾನಸಭೆ ಚುನಾವಣೆ ಕುರಿತಾಗಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮರಿಂದರ್‌ ಅವರು, ಪಂಜಾಬ್ ಕಾಂಗ್ರೆಸ್‌ನಲ್ಲಿ ತಲೆದೋರಿದ ಬಿಕ್ಕಟ್ಟಿನಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಆ ಪಕ್ಷದಿಂದ ಹೊರಬಂದು ನವೆಂಬರ್‌ನಲ್ಲಿ 'ಪಂಜಾಬ್ ಲೋಕ ಕಾಂಗ್ರೆಸ್' ಪಕ್ಷ ಸ್ಥಾಪಿಸಿದ್ದಾರೆ. ಅದರ ಪ್ರಧಾನ ಕಚೇರಿಯನ್ನು ಚಂಡೀಗಡದಲ್ಲಿ ಸೋಮವಾರ (ಡಿ.6ರಂದು) ಉದ್ಘಾಟಿಸಿದರು.

ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.