ADVERTISEMENT

ಪಂಜಾಬ್: ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್!

ಪಿಟಿಐ
Published 13 ಫೆಬ್ರುವರಿ 2022, 3:09 IST
Last Updated 13 ಫೆಬ್ರುವರಿ 2022, 3:09 IST
ಪ್ರಣೀತ್ ಕೌರ್ (ಚಿತ್ರ ಕೃಪೆ– ಪ್ರಣೀತ್ ಕೌರ್ ಟ್ವಿಟರ್ ಖಾತೆ)
ಪ್ರಣೀತ್ ಕೌರ್ (ಚಿತ್ರ ಕೃಪೆ– ಪ್ರಣೀತ್ ಕೌರ್ ಟ್ವಿಟರ್ ಖಾತೆ)   

ಪಟಿಯಾಲ: ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಬಿಜೆಪಿಯ ಚುನಾವಣಾ ಪ್ರಚಾರ ಸಭೆಗೆ ಹಾಜರಾಗಿದ್ದು, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪತಿ ಅಮರಿಂದರ್ ಸಿಂಗ್ ಪರ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂದ ಬಳಿಕ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷ ತೊರೆದು ‘ಪಂಜಾಬ್ ಲೋಕ್ ಕಾಂಗ್ರೆಸ್ (ಪಿಎಲ್‌ಸಿ)’ ಪಕ್ಷ ಸ್ಥಾಪಿಸಿದ್ದಾರೆ. ಈ ಪಕ್ಷವು ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಪಂಜಾಬ್‌ನಲ್ಲಿ ಬಿಜೆಪಿ, ಪಿಎಲ್‌ಸಿ ಹಾಗೂ ಎಸ್‌ಎಡಿ (ಸಂಯುಕ್ತ) ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಅಮರಿಂದರ್ ಪತ್ನಿ ಪ್ರಣೀತ್ ಕೌರ್ ಕಾಂಗ್ರೆಸ್‌ನಲ್ಲೇ ಇದ್ದಾರೆ. ಇವರು ಪಟಿಯಾಲ ಕ್ಷೇತ್ರದ ಸಂಸದೆ.

ADVERTISEMENT

ಅಮರಿಂದರ್ ಅವರು ಪಟಿಯಾಲ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ಜತೆಗೂಡಿ ಅವರು ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪ್ರಣೀತ್ ಕೌರ್ ಭಾಗವಹಿಸಿದ್ದಾರೆ.

‘ಅಮರಿಂದರ್ ಸಿಂಗ್ ಪರ ಮತಯಾಚನೆಗೆ ನಿಮ್ಮ ಕುಟುಂಬದ ಸದಸ್ಯೆಯಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಪ್ರಚಾರದ ವೇಳೆ ಕೌರ್ ಹೇಳಿದ್ದಾರೆ.

ಇದರೊಂದಿಗೆ, ಕೌರ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಉಂಟಾಗಿದೆ. ಕಾಂಗ್ರೆಸ್‌ನ ಚುನಾವಣಾ ಪ್ರಚಾರಾಭಿಯಾನಗಳಿಂದಲೂ ಕಳೆದ ಕೆಲವು ದಿನಗಳಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ.

ಒಂದೋ ಪಕ್ಷದ ಪರ ಪ್ರಚಾರಕ್ಕೆ ಬನ್ನಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಎಂದು ಪಟಿಯಾಲ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ವಿಷ್ಣು ಶರ್ಮಾ ಕೆಲವು ದಿನಗಳ ಹಿಂದೆ ಪ್ರಣೀತ್ ಕೌರ್‌ ಅವರನ್ನು ಆಗ್ರಹಿಸಿದ್ದರು.

ಚುನಾವಣೆ ಸಂದರ್ಭದಲ್ಲಿ ಯಾಕೆ ಮೌನ ವಹಿಸಿದ್ದೀರಿ ಎಂದು ಇತ್ತೀಚೆಗೆ ವರದಿಗಾರರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕೌರ್, ನಾನು ಕುಟುಂಬದ ಜತೆಗಿದ್ದೇನೆ. ಕುಟುಂಬವು ಉಳಿದೆಲ್ಲದಕ್ಕಿಂತಲೂ ಮಿಗಿಲಾದದ್ದು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.