ADVERTISEMENT

ಸತಲುಜ್-ಯಮುನಾ ನದಿ ಜೋಡಣೆ: ಪಂಜಾಬ್ ಹೊತ್ತಿ ಉರಿಯಲಿದೆ ಎಂದ ಅಮರಿಂದರ್ ಸಿಂಗ್

ಏಜೆನ್ಸೀಸ್
Published 18 ಆಗಸ್ಟ್ 2020, 16:10 IST
Last Updated 18 ಆಗಸ್ಟ್ 2020, 16:10 IST
ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್   

ಚಂಡೀಗಡ:ಸತಲುಜ್- ಯಮುನಾ ನದಿ ಜೋಡಣೆ ಕಾಲುವೆ ಒಪ್ಪಂದವನ್ನು ನೀವು ದೇಶದ ರಕ್ಷಣಾ ವಿಷಯವಾಗಿ ಪರಿಗಣಿಸಬೇಕು.ಈ ಒಪ್ಪಂದವನ್ನು ಮುಂದುವರಿಸುವುದಾದರೆ ಪಂಜಾಬ್ ಹೊತ್ತಿ ಉರಿಯುತ್ತದೆ. ಆಮೇಲೆ ಅದು ದೇಶದ ಸಮಸ್ಯೆ ಆಗಲಿದೆ.ಹರ್ಯಾಣ ಮತ್ತು ರಾಜಸ್ಥಾನವೂ ಇದರ ಪರಿಣಾಮ ಅನುಭವಿಸಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸತುಲುಜ್ ಯಮುನಾ ನದಿ ಜೋಡಣೆ ವಿಷಯದ ಬಗ್ಗೆ ಎರಡು ರಾಜ್ಯಗಳ ನಡುವೆ ಮಧ್ಯಪ್ರವೇಶ ನಡೆಸುವಂತೆ ಸುಪ್ರೀಂಕೋರ್ಟ್ ಜುಲೈ 28ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.ಈ ಹಿನ್ನೆಲೆಯಲ್ಲಿ ಮಂಗಳವಾರವಿಡಿಯೊ ಸಂವಾದ ನಡೆಸಿದ ಸಿಂಗ್, ಇವತ್ತು ನಾವು ಹರ್ಯಾಣ ಮತ್ತು ಜಲ ಸಂಪನ್ಮೂಲ ಸಚಿವರ ಜತೆ ಸಭೆ ನಡೆಸಿದ್ದೇವೆ.1966ರಲ್ಲಿ ಪಂಜಾಬ್ ವಿಭಜನೆ ಆದ ನಂತರ ನೀರು ಹೊರತು ಪಡಿಸಿ ನಮ್ಮ ಎಲ್ಲ ಸಂಪತ್ತುಗಳನ್ನು60:40ರ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದೆ. ಯಾಕೆಂದರೆಅವರಿಗೆ ರಾವಿ, ಬಿಯಾಸ್ ಮತ್ತು ಸತುಲೆಜ್ ನದಿ ನೀರಿದೆ. ಯಮುನಾದ್ದು ಇಲ್ಲ.ಅವರಿಗೂ ಯುಮುನಾ ನೀರು ನೀಡಿ 60:40 ಪ್ರಮಾಣದಲ್ಲಿ ಹಂಚಬೇಕು ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ಖಟ್ಟರ್ ಮತ್ತು ಕೇಂದ್ರ ಜಲ‌ಶಕ್ತಿ ಸಚಿವ ಗಜೇಂದ್ರ ಸಿಂಗ್ಶೆಖಾವತ್ ಕೂಡಾ ದೆಹಲಿಯಿಂದ ಸಭೆಯಲ್ಲಿ ಭಾಗಿಯಾಗಿದ್ದು ಉಭಯ ರಾಷ್ಟ್ರಗಳ ಮುಖ್ಯಮಂತ್ರಿಗಳು ಅವರವರ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಎರಡನೇ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ.

ADVERTISEMENT

ರಾವಿ ಮತ್ತು ಬಿಯಾಸ್ ನೀರಿನಲ್ಲಿ 3.5 ದಶಲಕ್ಷ ಎಕರೆ ಅಡಿ (ಎಂಎಎಫ್) ಪಾಲು ಕೇಳಿದ್ದು ಕಾಲುವೆಯ ಪೂರ್ಣಗೊಳಿಸುವಿಕೆ ಸಂಪೂರ್ಣವಾಗಿ ಸಂಧಾನ ಸಾಧ್ಯ ಅಲ್ಲ ಎಂಬ ನಿಲುವು ಹರ್ಯಾಣದ್ದು. ಪ್ರಸ್ತುತ ಹರ್ಯಾಣವುರಾವಿ ಮತ್ತು ಬಿಯಾಸ್ ನದಿಯಿಂದ 1.62 ಎಂಎಎಫ್ ನೀರನ್ನು ಪಡೆಯುತ್ತದೆ. ಇನ್ನೊಂದೆಡೆ ಪಂಜಾಬ್ ತನ್ನ ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣವು ವರ್ಷಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂದು ವಾದಿಸುತ್ತಿದೆ.

ಏನಿದು ವಿವಾದ?
ಈ ವಿವಾದಕ್ಕೆ ದಶಕಗಳ ಸುದೀರ್ಘ ಇತಿಹಾಸವೇ ಇದೆ. ಸತಲುಜ್‌ ನದಿಯನ್ನು ಯಮುನಾ ನದಿಗೆ ಕಾಲುವೆ ಮೂಲಕ ಜೋಡಿಸಿ ಹರಿಯಾಣ ಮತ್ತು ರಾಜಸ್ತಾನಕ್ಕೆ ನೀರು ಹರಿಸಲು1981ರಲ್ಲಿ ಆಗಿನ ಪಂಜಾಬ್‌ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 2004ರಲ್ಲಿ ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅದನ್ನು ಗೌರವಿಸುವ ಬದಲು ಹಳೆಯ ಒಪ್ಪಂದ ರದ್ದುಪಡಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಇದನ್ನು ಸಂವಿಧಾನದ ಒರೆಗೆ ಹಚ್ಚುವುದಕ್ಕಾಗಿ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ ಒಪ್ಪಿಸಿದ್ದರು. ಸತಲುಜ್‌– ಯಮುನಾ ನದಿ ಜೋಡಣೆ ಕಾಲುವೆ ನಿರ್ಮಾಣ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ್ದ ಪಂಜಾಬ್‌ನ ನಿರ್ಣಯ ಸಂವಿಧಾನಬಾಹಿರ ಎಂದು 2016ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.