ನವದೆಹಲಿ: ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಇನ್ನು ಮುಂದೆ ಅವಕಾಶ ದೊರೆಯಲಿದೆ.
ಈ ಪ್ರಸ್ತಾವನೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಪ್ಪಿಗೆ ನೀಡಿದೆ. ಆದರೆ, ಒಂದು ಪದವಿಯನ್ನು ರೆಗ್ಯುಲರ್ ಆಗಿ ಮತ್ತು ಇನ್ನೊಂದು ಪದವಿಯನ್ನು ಆನ್ಲೈನ್ ದೂರಶಿಕ್ಷಣದ ಮೂಲಕ ಪಡೆಯಬೇಕು ಎಂದು ಸೂಚಿಸಿದೆ.
’ಶೀಘ್ರ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಆಯೋಗದ ಇತ್ತೀಚಿನ ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ‘ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಕಳೆದ ವರ್ಷ ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ವಿದ್ಯಾರ್ಥಿಗಳು ಒಂದೇ ವಿಭಾಗದ ಅಥವಾ ಬೇರೆ ವಿಭಾಗದ ವಿಷಯಗಳನ್ನು ಏಕಕಾಲಕ್ಕೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಯುಜಿಸಿ 2012ರಲ್ಲೂ ಸಮಿತಿ ರಚಿಸಿತ್ತು. ಆದರೆ, ಸಮಿತಿ ವರದಿಗೆ ಒಪ್ಪಿಗೆ ದೊರೆತಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.