
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಷ್ಯ ಪೌರ್ಣಿಮೆಯಂದು ಪುಣ್ಯಸ್ನಾನ ಮಾಡಿದ ಅಪಾರ ಸಂಖ್ಯೆಯ ಭಕ್ತಸಾಗರ
ಪಿಟಿಐ ಚಿತ್ರ
ಪ್ರಯಾಗ್‌ರಾಜ್: ಮಾಘ ಮಾಸದ ‘ಪುಷ್ಯ ಪೂರ್ಣಿಮೆ’ಯಂದು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದರು.
ಮೈಕೊರೆವ ಚಳಿಯನ್ನು ಲೆಕ್ಕಿಸದೆ ಶನಿವಾರ ನಸುಕಿನಲ್ಲೇ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಗಂಗಾ–ಯಮುನಾ–ಸರಸ್ವತಿಯ ಸಂಗಮದಲ್ಲಿ ಮಿಂದೆದ್ದರು.
ಮಾಘ ಮೇಳವು ಶನಿವಾರದಿಂದ ಆರಂಭಗೊಂಡಿದ್ದು, ಫೆ. 15ರವರೆಗೆ ನಡೆಯಲಿದೆ. ಮೊದಲ ದಿನವೇ ಅನೇಕ ಸಾಧು–ಸಂತರು, ಸ್ವಾಮೀಜಿಗಳು ತಮ್ಮ ಭಕ್ತರೊಂದಿಗೆ ಪುಣ್ಯಸ್ನಾನ ಮಾಡಿದರು. ಶನಿವಾರ ಬೆಳಿಗ್ಗೆ ಒಂಬತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪುಣ್ಯಸ್ನಾನಕ್ಕಾಗಿ ಬರುವ ಭಕ್ತರಿಗಾಗಿ ಮಾಘ ಮೇಳದಲ್ಲಿ 10 ಸಾವಿರ ಚದರಡಿ ಪ್ರದೇಶದಲ್ಲಿ ಹತ್ತು ಸ್ನಾನಘಟ್ಟ ನಿರ್ಮಿಸಲಾಗಿದೆ. ಒಂಬತ್ತು ತೆಪ್ಪದ ಸೇತುವೆಗಳನ್ನು ನಿರ್ಮಿಸಲಾಗಿದೆ’ ಎಂದು ಪ್ರಯಾಗ್‌ರಾಜ್ ವಿಭಾಗೀಯ ಆಯುಕ್ತೆ ಸೌಮ್ಯಾ ಅಗರ್ವಾಲ್ ಹೇಳಿದ್ದಾರೆ.
ಸಾಧ್ವಿಯೊಬ್ಬರು ತ್ರಿಶೂಲ ಪ್ರದರ್ಶಿಸಿದರು
‘ಮಾಘಮೇಳ ಪ್ರದೇಶದಲ್ಲಿ ಯಾತ್ರಾರ್ಥಿಗಳಿಗಾಗಿ ಪ್ರತ್ಯೇಕ ಪಟ್ಟಣ ಸ್ಥಾಪಿಸಲಾಗಿದೆ. ಈ ಪಟ್ಟಣಕ್ಕೆ 'ಪ್ರಯಾಗ್ವಾಲ್' ಎಂದು ಹೆಸರಿಡಲಾಗಿದ್ದು, ಇದು ನಾಗವಾಸುಕಿ ದೇಗುಲದ ಎದುರಿದೆ’ ಎಂದು ಎಡಿಎಂ (ಮಾಘ ಮೇಳ) ದಯಾನಂದ ಪ್ರಸಾದ್ ತಿಳಿಸಿದ್ದಾರೆ.
‘ಅಂದಾಜು ಐದು ಲಕ್ಷ ಭಕ್ತರು ಶನಿವಾರದಿಂದಲೇ ‘ಕಲ್ಪವಾಸ’ ಆರಂಭಿಸಿದರು. ಇವರೆಲ್ಲರೂ ಒಂದು ತಿಂಗಳು ತ್ರಿವೇಣಿ ಸಂಗಮದ ತಟದಲ್ಲೇ ಬೀಡುಬಿಟ್ಟು ಧಾರ್ಮಿಕ ಕೈಂಕರ್ಯ ಕೈಗೊಳ್ಳಲಿದ್ದಾರೆ’ ಎಂದು ತ್ರಿವೇಣಿ ಸಂಗಮ ಆರತಿ ಸೇವಾ ಸಮಿತಿಯ ಅಧ್ಯಕ್ಷ ಆಚಾರ್ಯ ರಾಜೇಂದ್ರ ಮಿಶ್ರಾ ತಿಳಿಸಿದ್ದಾರೆ.
ಮಾಘ ಮಾಸದಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಮೋಕ್ಷ ದೊರೆಯಲಿದೆ ಎಂಬ ನಂಬಿಕೆಯು ಭಕ್ತ ಸಮೂಹದಲ್ಲಿ ಬೇರೂರಿದೆ. ಅದರಂತೆ ಅಸಂಖ್ಯಾತ ಭಕ್ತರು ನಿತ್ಯವೂ ಎರಡು ಬಾರಿ ನದಿಯಲ್ಲಿ ಮಿಂದೇಳುತ್ತಾರೆ. ಒಪ್ಪೊತ್ತಿನ ಊಟಕ್ಕೆ ಸೀಮಿತವಾಗಿ, ದಿನವಿಡೀ ದೇವರ ಧ್ಯಾನದಲ್ಲೇ ಸಮಯ ಕಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.