
ಸೋನ್‌ಭದ್ರ (ಉತ್ತರಪ್ರದೇಶ): ಇಲ್ಲಿನ ಸೋನ್‌ಭದ್ರ ಜಿಲ್ಲೆಯಲ್ಲಿ ಭಾನುವಾರ ಕಲ್ಲಿನ ಕ್ವಾರಿ ಕುಸಿದುಬಿದ್ದು, ಮೂರು ಮಂದಿ ಮೃತಪಟ್ಟಿದ್ದು, ಡಜನ್‌ಗೂ ಅಧಿಕ ಮಂದಿ ಸಿಲುಕಿಕೊಂಡಿದ್ದಾರೆ.
‘ಭಿಲ್ಲಿ ಮರ್ಕುಂಡಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ದೊಡ್ಡದಾದ ಬಂಡೆಯೊಂದು ಕುಸಿದುಬಿತ್ತು. ಸ್ಥಳದಿಂದ ಮೂರು ಮಂದಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಾಜಿನ ಪ್ರಕಾರ, ದುರಂತ ಸಂಭವಿಸಿದ ವೇಳೆ 15ಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದರು, ಇವರೆಲ್ಲರೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಪ್ರಕರಣದ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎನ್.ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
‘ನಿಷೇಧದ ಹೊರತಾಗಿಯೂ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಸಂಸ್ಥೆಯ ಮಾಲೀಕ, ಬ್ಲಾಕ್ ಮಾಜಿ ಮುಖ್ಯಸ್ಥನ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತರ ಪೈಕಿ ಇಬ್ಬರ ಮೃತದೇಹಗಳನ್ನು ಗುರುತಿಸಲಾಗಿದ್ದು, ಇಂದ್ರಜಿತ್ ಯಾದವ್ ಅವರ ಸಹೋದರ ಸಂತೋಷ್ ಎಂದು ಗುರುತಿಸಲಾಗಿದೆ.
‘ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ’ ಎಂದು ಸ್ಥಳೀಯ ಶಾಸಕ ಹಾಗೂ ಸಮಾಜ ಕಲ್ಯಾಣ ಸಚಿವ ಸಂಜೀವ್ ಕುಮಾರ್ ಗೊಂಡ್ ತಿಳಿಸಿದ್ದಾರೆ.
ಕಲ್ಲು ಕ್ವಾರಿಯು ನೂರಾರು ಅಡಿ ಆಳವಿರುವ ಕಾರಣ ಸ್ಥಳಕ್ಕೆ ತೆರಳಲು ರಕ್ಷಣಾ ಕಾರ್ಯಕರ್ತರಿಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.