ADVERTISEMENT

ಟಿಟಿಡಿ ಪರಕಾಮಣಿ ಕಳ್ಳತನ ಪ್ರಕರಣದ ಸುತ್ತ ಅನುಮಾನ

ಪಿಟಿಐ
Published 14 ಆಗಸ್ಟ್ 2024, 15:17 IST
Last Updated 14 ಆಗಸ್ಟ್ 2024, 15:17 IST
ಟಿಟಿಡಿ
ಟಿಟಿಡಿ   

ಹೈದರಾಬಾದ್: ತಿರುಪತಿಯ ತಿರುಮಲ ದೇವಸ್ಥಾನದ ಪರಕಾಮಣಿಯಲ್ಲಿ ಕಳೆದ ವರ್ಷ ನಡೆದ ಕಳ್ಳತನದ ಪ್ರಕರಣವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ತಿರುಮಲ ದೇವಸ್ಥಾನದ ಹುಂಡಿಗೆ ಭಕ್ತರು ಅರ್ಪಿಸುವ ಹಣವನ್ನು ಪರಕಾಮಣಿಯಲ್ಲಿ ಎಣಿಸಲಾಗುತ್ತದೆ. ಈ ಮೊತ್ತವು ಕೆಲವು ಸಂದರ್ಭಗಳಲ್ಲಿ ದಿನವೊಂದಕ್ಕೆ ₹1 ಕೋಟಿಯನ್ನು ಮೀರುವುದಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಪರಕಾಮಣಿಯ ಸಿಬ್ಬಂದಿಯೊಬ್ಬರು ₹72 ಸಾವಿರ ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ಕದಿಯುವಾಗ ಸಿಕ್ಕಿಬಿದ್ದರು. ದೇವಸ್ಥಾನದ ವಿಚಕ್ಷಣಾ ವಿಭಾಗವು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ದೂರು ನೀಡಿತ್ತು.

ADVERTISEMENT

ದೂರು ಬಂದ ದಿನವೇ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಮಾರನೆಯ ದಿನವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ನಂತರ ಆ ಸಿಬ್ಬಂದಿಗೆ ಜಾಮೀನು ದೊರೆಯಿತು. ಆದರೆ, ಪರಕಾಮಣಿಯಲ್ಲಿ ವಿದೇಶಿ ಕರೆನ್ಸಿಗಳನ್ನು ಕದಿಯುವುದು ಮಾಮೂಲಿಯಾಗಿದೆ ಎಂಬ ಅನುಮಾನವನ್ನು ಆಡಳಿತಾರೂಢ ಪಕ್ಷದ ಶಾಸಕ ಭೂಮಿರೆಡ್ಡಿ ರಾಮಗೋಪಾಲ್ ರೆಡ್ಡಿ ವ್ಯಕ್ತಪಡಿಸಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ಮಂಡಳಿಯ ಅಂದಿನ ಅಧ್ಯಕ್ಷ ಆರೋಪಿಯ ಜೊತೆ ಒಪ್ಪಂದ ಮಾಡಿಕೊಂಡು, ಅವರನ್ನು ಲೋಕ ಅದಾಲತ್ ಮೂಲಕ ಪ್ರಕರಣದಿಂದ ಪಾರು ಮಾಡಿದ್ದಾರೆ. ಹೀಗೆ ಮಾಡುವ ಮೊದಲು ಆರೋಪಿಯ ಕಡೆಯಿಂದ ಕನಿಷ್ಠ ₹100 ಕೋಟಿ ಮೌಲ್ಯದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಶಾಸಕ ರೆಡ್ಡಿ ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಿಐಡಿ ಅಥವಾ ರಾಜ್ಯ ವಿಚಕ್ಷಣಾ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಹುಂಡಿಯಲ್ಲಿ ಇರುವ ನಗದು, ನಾಣ್ಯ ಹಾಗೂ ಇತರ ವಸ್ತುಗಳನ್ನು ವಿಭಾಗಿಸಿ ಎಣಿಕೆ ಮಾಡುವ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳು ಉಸ್ತುವಾರಿ ನಡೆಸುತ್ತಿರುತ್ತಾರೆ. ಸಂಪ್ರದಾಯದಂತೆ ಪೆದ್ದ ಜೀಯಂಗಾರ್ ಸ್ವಾಮಿ ಮಠದ ಗುಮಾಸ್ತರೊಬ್ಬರು ಕೂಡ ಎಣಿಕೆಯ ಉಸ್ತುವಾರಿಯಲ್ಲಿ ತೊಡಗಿರುತ್ತಾರೆ.

ಮಠದ ಗುಮಾಸ್ತ ಸಿ.ವಿ. ರವಿ ಕುಮಾರ್ ಅವರು ಕರೆನ್ಸಿ ನೋಟುಗಳ ಕಟ್ಟನ್ನು ತಮ್ಮ ಪೃಷ್ಠಗಳ ನಡುವೆ ಅಡಗಿಸಿ ಇರಿಸಿಕೊಂಡಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಟಿಟಿಡಿ ಅಧಿಕಾರಿ ವೈ. ಸತೀಶ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದರು.

‘ಅಪರಾಧ ಪತ್ತೆಯಾದ ಒಂದೇ ದಿನದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಟಿಟಿಡಿ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಆರೋಪಿ ರವಿ ಕುಮಾರ್ ಅವರು ಟಿಟಿಡಿ ಅಧಿಕಾರಿಗಳಿಂದ, ಪೊಲೀಸರಿಂದ ಬೆದರಿಕೆ ಎದುರಿಸಿದ್ದಾರೆ. ಆರೋಪಿಯ ಎಲ್ಲ ಆಸ್ತಿಗಳನ್ನು ಬಲವಂತದಲ್ಲಿ ವಶಕ್ಕೆ ಪಡೆಯಲಾಗಿದೆ. ಇದಾದ ನಂತರದಲ್ಲಿ ಪೊಲೀಸರು ಪ್ರಕರಣವನ್ನು ಲೋಕ ಅದಾಲತ್‌ಗೆ ರವಾನಿಸಿದ್ದರು. ಆದರೆ, ಆರೋಪಿ ಹಾಗೂ ಟಿಟಿಡಿ ಅಧಿಕಾರಿಗಳು ನಡೆಸಿದ ಲಾಬಿ ಯಶಸ್ಸು ಕಂಡಿದ್ದು ಪ್ರಕರಣವು ವಜಾಗೊಂಡಿದೆ’ ಎಂದು ಶಾಸಕ ರೆಡ್ಡಿ ತಿಳಿಸಿದರು.

ಕಳ್ಳತನವು ಬಹುಕಾಲದಿಂದಲೂ ನಡೆಯುತ್ತಿತ್ತೇ ಅಥವಾ ಅದು ಮೊದಲ ಬಾರಿಗೆ ನಡೆದಿದ್ದೇ ಎಂಬುದನ್ನು ಪ್ರಶ್ನಿಸಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.