ರಾಧಿಕಾ ಯಾದವ್–ಪಿಟಿಐ ಚಿತ್ರ
ಗುರುಗ್ರಾಮ: ‘ಹರಿಯಾಣದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಸ್ವಂತ ಅಕಾಡೆಮಿ ಹೊಂದಿರಲಿಲ್ಲ. ಕಲಿಕಾರ್ಥಿಗಳಿಗೆ ವಿವಿಧ ಪ್ರದೇಶದಲ್ಲಿರುವ ಟೆನ್ನಿಸ್ ಮೈದಾನಗಳಲ್ಲಿ ತರಬೇತಿ ನೀಡುತ್ತಿದ್ದರು. ಇದಕ್ಕೂ ಆಕೆಯ ತಂದೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಗುರುಗ್ರಾಮದ ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮದ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಎರಡು ಮಹಡಿಯ ಕಟ್ಟಡದಲ್ಲಿ ಕುಟುಂಬದ ಜೊತೆಗೆ ವಾಸವಾಗಿದ್ದ ರಾಧಿಕಾ ಅವರನ್ನು ತಂದೆ ದೀಪಕ್ ಯಾದವ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ದೀಪಕ್ ಅವರನ್ನು ಶನಿವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಶುಕ್ರವಾರದ ಮಟ್ಟಿಗೆ ತಮ್ಮ ಕಸ್ಟಡಿಗೆ ಪಡೆದಿದ್ದ ಪೊಲೀಸರು ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಅವರ ನಿವಾಸದಲ್ಲಿದ್ದ ಐದು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದರು. ತನಿಖೆಯ ಭಾಗವಾಗಿ ಅವರ ಗ್ರಾಮಕ್ಕೆ ಕರೆದೊಯ್ಯಲಾಯಿತು.
‘ತನಿಖೆಯ ವೇಳೆ ಮಗಳನ್ನು ಹತ್ಯೆ ಮಾಡಿರುವುದನ್ನು ದೀಪಕ್ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿವಿಧ ಕಟ್ಟಡಗಳ ಬಾಡಿಗೆಯಿಂದ ಸಾಕಷ್ಟು ಆದಾಯ ಪಡೆಯುತ್ತಿದ್ದ ಅವರು, ಮಗಳ ದುಡಿಮೆ ಮೇಲೆ ಅವಲಂಬಿತರಾಗಿ ಇರಲಿಲ್ಲ. ಅಕಾಡೆಮಿಗಳಲ್ಲಿ ತರಬೇತಿ ಮೂಲಕ ಮಗಳು ಹಣ ಸಂಪಾದಿಸುತ್ತಿದ್ದ ವಿಚಾರಕ್ಕೆ ಹಲವು ಸಲ ಆಕ್ಷೇಪ ವ್ಯಕ್ತಪಡಿಸಿದ್ದರು. ತರಬೇತಿ ಸ್ಥಗಿತಗೊಳಿಸಲು ಮಗಳು ಕೂಡ ಒಪ್ಪಿರಲಿಲ್ಲ. ಈ ವಿಚಾರವೇ ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘2023 ರಲ್ಲಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೊಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ತರಬೇತಿಯ ಮೂಲಕ ಮಗಳು ಸಂಪಾದನೆ ಮಾಡುವುದನ್ನು ನೋಡಲು ತಂದೆ ಬಯಸಿರಲಿಲ್ಲ’ ಎಂದು ಸೆಕ್ಟರ್ 56ರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಧಿಕಾಳ ಹಿಂಬದಿಯಿಂದ ಮೂರು ಹಾಗೂ ಭುಜಕ್ಕೆ ಒಂದು ಗುಂಡು ತಗುಲಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಂತ್ಯಕ್ರಿಯೆಯು ಶುಕ್ರವಾರ ಕುಟುಂಬಸ್ಥರ ಸ್ವಗ್ರಾಮ ವಾಜೀರಾಬಾದ್‌ನಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.