ADVERTISEMENT

ರಫೇಲ್‌ ಪರೀಕ್ಷೆಯಲ್ಲಿ ನಾಲ್ಕು ಬಾರಿ ಫೇಲ್‌

ತಾಂತ್ರಿಕ ದೋಷದಿಂದ ಫ್ರಾನ್ಸ್‌ ಯುದ್ಧ ವಿಮಾನ ಖರೀದಿಸಲು ನಿರಾಕರಿಸಿದ್ದ ರಕ್ಷಣಾ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 4:18 IST
Last Updated 14 ಫೆಬ್ರುವರಿ 2019, 4:18 IST
   

ನವದೆಹಲಿ: ಭಾರತೀಯ ವಾಯುಸೇನೆ ನಡೆಸಿದ ಎಲ್ಲ ತಾಂತ್ರಿಕ ಮೌಲ್ಯಮಾಪನ ಮತ್ತು ಪರೀಕ್ಷಾರ್ಥ ಹಾರಾಟದಲ್ಲಿ ರಫೇಲ್‌ ಯುದ್ಧ ವಿಮಾನಗಳು ವಿಫಲವಾಗಿದ್ದವು ಎಂಬ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫ್ರಾನ್ಸ್‌ನ ಡಾಸೊ ಕಂಪನಿಯಿಂದ ಭಾರತೀಯ ವಾಯುಸೇನೆ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಮುನ್ನ ನಾಲ್ಕು ಬಾರಿ ಪರೀಕ್ಷೆ ನಡೆಸಿತ್ತು. ವಿಮಾನದಲ್ಲಿ ಕಂಡುಬಂದ ತಾಂತ್ರಿಕ ದೋಷಗಳ ಕಾರಣ ಪರೀಕ್ಷಾರ್ಥ ಹಂತದಲ್ಲಿಯೇ ನಾಲ್ಕೂ ಬಾರಿ ತಿರಸ್ಕರಿಸಲಾಗಿತ್ತು

ಪರೀಕ್ಷಾರ್ಥ ಹಂತದಲ್ಲಿ ವಿಫಲವಾದ ನಂತರವೂ ಫ್ರಾನ್ಸ್‌ನ ಡಾಸೊ ಕಂಪನಿಯ ಯುದ್ಧ ವಿಮಾನಗಳಿಗೆ ಹಾರಾಟ ಹಂತದಲ್ಲಿ ಸಾಮರ್ಥ್ಯ ಸಾಬೀತು ಪಡಿಸಲು ವಿಶೇಷ ಅವಕಾಶ ನೀಡಲಾಗಿತ್ತು ಎಂದು ಬುಧವಾರ ಸಂಸತ್‌ನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಮೇ 2008 ರಿಂದ ಮೇ 2009ರವರೆಗೆ ಒಂದು ವರ್ಷದ ಅವಧಿಯಲ್ಲಿ ನಡೆಸಲಾದ ಎಲ್ಲ ನಾಲ್ಕೂ ತಾಂತ್ರಿಕ ಪರೀಕ್ಷೆಯಲ್ಲಿ ರಫೇಲ್‌ ಯುದ್ಧ ವಿಮಾನ ವಿಫಲವಾಗಿತ್ತು. ತಾಂತ್ರಿಕ ದೋಷಗಳು ಕಂಡುಬಂದ ಕಾರಣ ಡಾಸೊ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನ ಖರೀದಿಸುವ ನಿರ್ಧಾರ ಕೈಬಿಡಲು ನಿರ್ಧರಿಸಲಾಗಿತ್ತು.

ಈ ಕುರಿತು ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಅಂತಿಮ ನಿರ್ಧಾರ ಕೈಗೊಳ್ಳುವ ಒಂದು ವಾರ ಮೊದಲು ಡಾಸೊ ಕಂಪನಿ ಸ್ವಯಂ ಪ್ರೇರಣೆಯಿಂದ ಹೊಸ ಪ್ರಸ್ತಾವನೆಯೊಂದನ್ನು ರಕ್ಷಣಾ ಸಚಿವಾಲಯದ ಮುಂದಿಟ್ಟಿತ್ತು.

ಭಾರತೀಯ ವಾಯುಸೇನೆಯ ಬೇಡಿಕೆಗೆ ತಕ್ಕಂತೆ ಯುದ್ಧ ವಿಮಾನದಲ್ಲಿ ಅಗತ್ಯ ಬದಲಾವಣೆ ಮತ್ತು ತಾಂತ್ರಿಕ ಸುಧಾರಣೆ ಮಾಡಲು ಸಿದ್ಧ ಎಂದು ಒಪ್ಪಿಗೆ ಸೂಚಿಸಿತ್ತು.

ಸಿಎಜಿ ವರದಿ ಆಕ್ಷೇಪಗಳೇನು?

* ರಫೇಲ್‌ ಪರೀಕ್ಷಾರ್ಥ ಹಂತದಲ್ಲಿ 9 ದೋಷಗಳನ್ನು ಪಟ್ಟಿ ಮಾಡಲಾಗಿತ್ತು. ಅದಾದ ನಂತರ ರಕ್ಷಣಾ ಸಚಿವಾಲಯ ಮತ್ತು ಡಾಸೊ ಅಧಿಕಾರಿಗಳ ಮಧ್ಯೆ ನಡೆದ ಮಾತುಕತೆಯ ವೇಳೆ ಮತ್ತೆ ಐದು ದೋಷಗಳು ಬೆಳಕಿಗೆ ಬಂದಿದ್ದವು.

* ಭಾರತ ರಕ್ಷಣಾ ಸಚಿವಾಲಯ ಸೂಚಿಸಿದ್ದ ಎಲ್ಲ ತಂತ್ರಿಕ ದೋಷಗಳನ್ನು ಸರಿಪಡಿಸಲು ಕಂಪನಿ ಒಪ್ಪಿಗೆ ಸೂಚಿಸಿತ್ತು. ಆದರೆ, ‘ಭಾರತ–ಫೆಸಿಪಿಕ್‌ ಪರಿಷ್ಕರಣೆ’ ಎಂಬ ಹೆಸರಿನಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹೆಚ್ಚಿನ ಶುಲ್ಕ ವಿಧಿಸಿತ್ತು.

* ರಕ್ಷಣಾ ಸಚಿವಾಲಯ ಡಾಸೊ ಮುಂದಿಟ್ಟ ಬದಲಾವಣೆ ಬೇಡಿಕೆ ಮತ್ತು ನಿಗದಿಪಡಿಸಿದ್ದ 14 ಮಾನದಂಡಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಗಳು ಕಾಣಲಿಲ್ಲ.

* ಡಾಸೊ ಜತೆ ಬಿಡ್‌ ಸಲ್ಲಿಸಿದ್ದ ಇನ್ನುಳಿದ ಐದು ಕಂಪನಿಗಳ ಯುದ್ಧ ವಿಮಾನಗಳಲ್ಲಿ ಈ ಎಲ್ಲ ಸೌಲಭ್ಯಗಳು ಅದಾಗಲೇ ಇದ್ದವು.

* ಆದರೂ, ರಫೇಲ್‌ ಮತ್ತು ಯುರೊಫೈಟರ್‌ ಎರಡು ವಿಮಾನಗಳ ಖರೀದಿಗೆ ಅರ್ಹ ಎಂದು ಒಪ್ಪಿಗೆ ನೀಡಲಾಗಿದೆ.

* ವಾಯುಪಡೆ ಸಿಬ್ಬಂದಿಗೆ ಅಗತ್ಯವಾದ ಮಾನದಂಡಗಳ (ಎಎಸ್‌ಕ್ಯೂಆರ್‌) ಕೊರತೆ ಮತ್ತು ಗುಣಮಟ್ಟದ ವಿನ್ಯಾಸ ಇಲ್ಲ ಎಂಬ ಕಾರಣ ನೀಡಿ ಇತರ ನಾಲ್ಕು ವಿಮಾನಗಳ ಖರೀದಿಯನ್ನು ನಿರಾಕರಿಸಲಾಗಿದೆ.

ರಫೇಲ್‌ ಜತೆ ಸ್ಪರ್ಧೆಯಲ್ಲಿದ್ದ ಐದು ಯುದ್ಧ ವಿಮಾನ

1.ಎಂಐಜಿ –35

2. ಯುರೊಫೈಟರ್‌

3. ಎಫ್‌–16

4. ಗ್ರಿಪ್ಪನ್‌

5. ಎಫ್‌ –18/ಎ

***

ಪರೀಕ್ಷಾರ್ಥ ಹಂತದಲ್ಲಿ ಯುದ್ಧ ವಿಮಾನಗಳಲ್ಲಿ ಪತ್ತೆಯಾದ ತಾಂತ್ರಿಕ ದೋಷ ಸರಿಪಡಿಸಲಾಗಿದೆಯೇ ಎಂಬುದನ್ನು ಪ್ರತ್ಯಕ್ಷವಾಗಿ ಪರಿಶೀಲನೆ ನಡೆಸದೆ, ಕೇವಲ ಪ್ರಯೋಗಾಲಯ ಪ್ರಾತ್ಯಕ್ಷಿಕೆ ಆಧಾರದ ಮೇಲೆ ಯುರೊಫೈಟರ್‌ ಮತ್ತು ರಫೇಲ್‌ಗೆ ತಾಂತ್ರಿಕ ಒಪ್ಪಿಗೆ ನೀಡಲಾಗಿತ್ತು

– ಮಹಾಲೇಖಪಾಲರ(ಸಿಎಜಿ) ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.