ADVERTISEMENT

‘ಬೊಫೋರ್ಸ್‌ನಂಥದ್ದೇ ಸುಳಿಯಲ್ಲಿ ಮೋದಿ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 19:56 IST
Last Updated 7 ನವೆಂಬರ್ 2018, 19:56 IST
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ   

*ರಫೇಲ್‌ ಒಪ್ಪಂದದಿಂದ ಹಿಡಿದು ಸಿಬಿಐನ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಸೇರಿ ಹಲವು ಗಂಭೀರ ಆರೋಪಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎದುರಿಸುತ್ತಿದೆ. ಯುಪಿಎ–2 ಸರ್ಕಾರ ಎದುರಿಸಿದ್ದ ಸ್ಥಿತಿಯಲ್ಲಿಯೇ ಈ ಸರ್ಕಾರವೂ ಇದೆಯೇ?
ಯುಪಿಎ ಮೇಲಿನ ಭ್ರಷ್ಟಾಚಾರದ ಆರೋಪಕ್ಕಿಂತಲೂ ಈಗಿನ ಸರ್ಕಾರದ ಭ್ರಷ್ಟಾಚಾರ ಮತ್ತು ಇಲ್ಲಿ ಕೈಬದಲಾಗಿರುವ ಮೊತ್ತದ ಪ್ರಮಾಣ ತೀರಾ ದೊಡ್ಡದು. ಕೇವಲ ಭ್ರಷ್ಟಾಚಾರ ಮಾತ್ರವಲ್ಲ, ಪ್ರಜಾಪ್ರಭುತ್ವದ ಪ್ರತಿ ಅಂಗಗಳ ಸಾಂವಿಧಾನಿಕ ಸಿಂಧುತ್ವಕ್ಕೂ ಈ ಸರ್ಕಾರ ಧಕ್ಕೆ ತಂದಿದೆ. ಕೋಮು ಧ್ರುವೀಕರಣವನ್ನು ಉದ್ದೀಪಿಸಿ ಸಮಾಜದ ಸ್ವಾಸ್ತ್ಯವನ್ನು ಈ ಸರ್ಕಾರ ಹಾಳುಮಾಡಿದೆ. ಈಗ ಸಮಾಜದಲ್ಲಿ ತಲೆದೋರಿರುವ ದ್ವೇಷ ಮತ್ತು ಅಸಹಿಷ್ಣತೆಯ ವಾತಾವರಣವು ದೇಶವಿಭಜನೆಯ ಸಂದರ್ಭಕ್ಕಿಂತಲೂ ಅಪಾಯಕಾರಿಯಾದ ಹಿಂಸಾಚಾರಕ್ಕೆ ದಾರಿಮಾಡಿಕೊಡುತ್ತಿದೆ. ಇವೆಲ್ಲವೂ ಯುಪಿಎ–2ಗಿಂತಲೂ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸಿವೆ.

* ರಫೇಲ್‌ ವಿವಾದವು ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬ ಭಾವನೆ ಇದೆ. ಹಲವರು ಇದನ್ನು ಬೊಫೋರ್ಸ್ ಹಗರಣಕ್ಕೂ ಹೋಲಿಸುತ್ತಿದ್ದಾರೆ. ಈ ವಿಚಾರದಲ್ಲಿ ನಿಮ್ಮ ಅನಿಸಿಕೆ?
ಖಂಡಿತವಾಗಿಯೂ ರಫೇಲ್‌ ವಿವಾದವು ಮೋದಿ ಸರ್ಕಾರವನ್ನು ಬೊಫೋರ್ಸ್‌ನಂಥದ್ದೇ ಪರಿಸ್ಥಿತಿಯಲ್ಲಿ ಸಿಲುಕಿಸಿದೆ. ನಾನು ಮೊದಲು ಹೇಳಿದ ಸಮಸ್ಯೆಗಳನ್ನೂ ಸೇರಿಸಿಕೊಂಡರೆ ಈ ಸರ್ಕಾರದ ಸ್ಥಿತಿ ಬೊಫೋರ್ಸ್ ಪರಿಸ್ಥಿತಿಗಿಂತಲೂ ಹೆಚ್ಚು ಬಿಗಾಡಿಯಿಸಿದೆ. ಬೊಫೋರ್ಸ್‌ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಕಾಂಗ್ರೆಸ್ ಒಪ್ಪಿಕೊಂಡಿತ್ತು. ಆದರೆ ಈ ಸರ್ಕಾರ ಅದನ್ನೂ ಮಾಡುತ್ತಿಲ್ಲ. ಸಮಿತಿ ರಚಿಸಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ರಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಮೋದಿ ಸರ್ಕಾರವೇ ಒಪ್ಪಿಕೊಂಡಂತಾಗಿದೆ.

* ಬಿಜೆಪಿ ಸರ್ಕಾರ ವಿಶ್ವಾಸಾರ್ಹತೆಯ ಸಮಸ್ಯೆ ಎದುರಿಸುತ್ತಿದೆ ಎಂಬುದು ನಿಮ್ಮ ಮಾತಿನ ಅರ್ಥವೇ?
ಖಂಡಿತವಾಗಿ. ಈ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಂದಿರಿಸಿದೆ. ನೋಟು ರದ್ದತಿ, ಜಿಎಸ್‌ಟಿಗಳು ಪ್ರಗತಿಯನ್ನು ಕುಂಠಿತಗೊಳಿಸಿದೆ. ಸಂವಿಧಾನ ಮತ್ತು ಅದರ ಮೌಲ್ಯಗಳು ಹಾಗೂ ಜನರ ಹಕ್ಕುಗಳನ್ನು ಕಾಪಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ADVERTISEMENT

*ಮೋದಿಯನ್ನು ಎದುರಿಸಲು ವಿರೋಧಪಕ್ಷಗಳಲ್ಲಿ ಪ್ರಬಲ ನಾಯಕನೇ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದೆಯಲ್ಲ?
ಇದು ಜನರ ಮನಸ್ಸಿನಲ್ಲಿ ಇರುವ ಭಾವನೆಯಲ್ಲ. ಬದಲಿಗೆ ಬಿಜೆಪಿ ಹಾಗೆ ಹೇಳಿಕೊಳ್ಳುತ್ತಿದೆ ಅಷ್ಟೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಬಿಜೆಪಿ ಹೀಗೇ ಹೇಳಿಕೊಳ್ಳುತ್ತಿತ್ತು. ಆಗ ವಾಜಪೇಯಿಯನ್ನು ಎದುರಿಸಲು ಯಾರಿದ್ದರು? 2004ರ ಚುನಾವಣೆಯಲ್ಲಿ ಏನಾಯಿತು? ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಯಾರಾದರೂ ಊಹಿಸಿದ್ದರಾ? ಹೀಗಾಗಿ ಬಿಜೆಪಿ ಹೇಳುತ್ತಿರುವಂತೆ ವಿರೋಧ ಪಕ್ಷಗಳಲ್ಲಿ ನಾಯಕತ್ವದ ಸಮಸ್ಯೆ ಇಲ್ಲ. ಮೋದಿಯ ಸುತ್ತ ವ್ಯಕ್ತಿ ವಿಜೃಂಭಣೆಯ ಪ್ರಭಾವಳಿಯನ್ನು ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆಯಷ್ಟೆ.

* ಈಗಿನ ಐದು ವಿಧಾನಸಭೆ ಚುನಾವಣೆಗಳು ವಿಪಕ್ಷಗಳ ಒಗ್ಗಟ್ಟಿಗೆ ಒಡ್ಡಿರುವ ಪರೀಕ್ಷೆ ಎನ್ನಲಾಗುತ್ತಿದೆ. ಆದರೆ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಗಿಂತ ಭಿನ್ನಾಭಿಪ್ರಾಯಗಳೇ ಹೆಚ್ಚಿವೆಯಲ್ಲಾ?
ಮೋದಿಯನ್ನು ಸೋಲಿಸಬೇಕು ಎಂಬ ಒಂದೇ ಕಾರಣಕ್ಕೆ ಒಗ್ಗಟ್ಟಾದರೆ ಅರ್ಥವಿಲ್ಲ. ಬದಲಿಗೆ ಸಮಸ್ಯೆಗಳನ್ನು ಆಧರಿಸಿದ ಕಾರ್ಯತಂತ್ರದ ಮೂಲಕ ಮೋದಿಯನ್ನು ಸೋಲಿಸಬೇಕು. ರಾಜ್ಯವಾರು ಮೈತ್ರಿಗಳು ರಾಷ್ಟ್ರೀಯಮಟ್ಟದ ಮೈತ್ರಿಗೆ ದಾರಿಮಾಡಿಕೊಡಲಿವೆ. 1996ರಲ್ಲಿ ಮತ್ತು 2004ರಲ್ಲಿ ಹೀಗೇ ಆಗಿತ್ತು. ಆದರೆ ಈ ಐದು ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಒಡೆಯುವ ಉದ್ದೇಶದಿಂದ ತೃತೀಯ ರಂಗವನ್ನು ರಚಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.