ADVERTISEMENT

ರಫೇಲ್ ಡೀಲ್: ಮುನ್ನೆಲೆಗೆ ಬಂತು ಬೆಂಗಳೂರು ನಂಟು, ದಿನಕ್ಕೊಂದು ತಿರುವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2018, 2:57 IST
Last Updated 25 ಸೆಪ್ಟೆಂಬರ್ 2018, 2:57 IST
   

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ.ರಫೇಲ್ ಯುದ್ಧವಿಮಾನಗಳನ್ನು ತಯಾರಿಸುವ ಡಸಾಲ್ಟ್‌ ಕಂಪನಿಯ ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ಸುದ್ದಿಯೊಂದನ್ನು ಪ್ರಕಟಿಸಿ ರಿಲಯನ್ಸ್‌ಗೆ ಆದ್ಯತೆ ಸಿಗಲು ಏನು ಕಾರಣ ಎಂಬುದನ್ನು ವಿಶ್ಲೇಷಿಸಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೇಲ್ ವಿವಾದದ ಹಿಂದೆ ವಿದೇಶಿ ಹುನ್ನಾರವಿದೆಎಂದು ಹೇಳುವ ಮೂಲಕ ಚರ್ಚೆಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ತೀವ್ರ ದಾಳಿಗೆ ಸಿಲುಕಿರುವ ಬಿಜೆಪಿ ‘ಕಾಂಗ್ರೆಸ್‌ನ ರಫೇಲ್ ಟೀಕೆಗೆರಾಬರ್ಟ್‌ ವಾದ್ರಾ ಕಾರಣ’ ಎಂದು ಹೊಸ ಅಸ್ತ್ರ ಪ್ರಯೋಗಿಸಿದೆ.

ರಿಲಯನ್ಸ್ ಒಪ್ಪಂದ ಅಂತಿಮಹಂತಕ್ಕೆ ಬಂದಿದ್ದು ಬೆಂಗಳೂರಿನಲ್ಲಿ

‘ರಫೇಲ್‌ನ ಭಾರತೀಯ ಸಹವರ್ತಿ ಕಂಪನಿಯಾಗಿ ‘ರಿಲಯನ್ಸ್ ಡಿಫೆನ್ಸ್’ ಹೆಸರನ್ನು ಭಾರತ ಸರ್ಕಾರ ಪ್ರಸ್ತಾಪಿಸಿತ್ತು. ನಮ್ಮ ಹತ್ತಿರ ಬೇರೆ ಆಯ್ಕೆಗಳು ಇರಲಿಲ್ಲ’ ಎಂದು ಫ್ರಾನ್ಸ್‌ನ ಮಾಜಿ ಅದ್ಯಕ್ಷ ಒಲಾಂಡ್ ಹೇಳಿಕೆ ನೀಡಿದ ನಂತರ ರಫೇಲ್ ವಾಗ್ವಾದ ತಾರಕಕ್ಕೇರಿತ್ತು. ‘ರಿಲಯನ್ಸ್‌ ಒಂದನ್ನೇ ಪರಿಗಣಿಸಬೇಕು ಎಂದು ಭಾರತ ಸರ್ಕಾರ ಒತ್ತಡ ಹೇರಿತ್ತೇ’, ಎನ್ನುವ ಪ್ರಶ್ನೆಗೆ ‘ರಫೇಲ್ ಯುದ್ಧವಿಮಾನಗಳನ್ನು ತಯಾರಿಸುವ ಡಸಾಲ್ಟ್ ಮಾತ್ರ ಉತ್ತರಿಸಬಲ್ಲದು’ ಎಂದು ಉತ್ತರಿಸುವ ಮೂಲಕ ನಂತರದ ದಿನಗಳಲ್ಲಿ ಒಲಾಂಡ್ ನಂತರ ತಮ್ಮ ಮೊದಲ ಹೇಳಿಕೆಯಿಂದ ಹಿಂದೆ ಸರಿದಿದ್ದರು.

ADVERTISEMENT

ಇದೀಗ‘ಎನ್‌ಡಿಟಿವಿ' ಡಸಾಲ್ಟ್ ಕಂಪನಿಯ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದನ್ನು ಪ್ರಕಟಿಸಿದೆ. ‘ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ನಮ್ಮ ಸಹವರ್ತಿ ಕಂಪನಿಯಾಗಿರುಬೇಕು ಎಂದು ಯಾರೂ ಒತ್ತಡ ಹೇರಲಿಲ್ಲ. ಮುಕೇಶ್ ಅಂಬಾನಿಯಿಂದ ಕಂಪನಿ ಅನಿಲ್‌ ತೆಕ್ಕೆಗೆ ಬಂದ ನಂತರ ಮಾತುಕತೆ ಆರಂಭವಾಯಿತು. 2015ರಲ್ಲಿ ಬೆಂಗಳೂರಿನಲ್ಲಿ ನಡೆದ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದ ವೇಳೆ ಸಹಭಾಗಿತ್ವದ ಮಾತುಕತೆ ಅಂತಿಮಗೊಂಡಿತು. ಇದಾದ ಎರಡೇ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ಯಾರೀಸ್‌ನಲ್ಲಿ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಪ್ರಕಟಿಸಿದರು’ ಎಂದು ಡಸಾಲ್ಟ್‌ನ ಹೆಸರು ಹೇಳಲು ಇಚ್ಛಿಸದ ಪ್ರತಿನಿಧಿಗಳು ಹೇಳಿದ್ದಾರೆ.

‘ರಿಲಯನ್ಸ್‌ ಡಿಫೆನ್ಸ್‌ ನಾಗಪುರದಲ್ಲಿ ರನ್‌ವೇ ಸಮೀಪ ಸಾಕಷ್ಟು ಭೂಮಿ ಹೊಂದಿತ್ತು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ನೋಂದಣಿಯಾಗಿತ್ತು. ಇದೇ ಕಾರಣಕ್ಕೆ ರಿಲಯನ್ಸ್‌ಗೆ ಡಸಾಲ್ಟ್‌ ತನ್ನ ಸಹವರ್ತಿಯಾಗಿ ಕೆಲಸ ಮಾಡಲು ಅವಕಾಶ ನೀಡಿತು’ ಎಂದು ಆ ಪ್ರತಿನಿಧಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಸೆ.23ರಂದು ಭಾರತೀಯ ವಾಯುಪಡೆ ಮತ್ತು ಎಚ್‌ಎಎಲ್‌ ಮುಖ್ಯಸ್ಥರ ಸಮಕ್ಷಮ, ಪ್ರಧಾನಿ ರಫೇಲ್ ಒಪ್ಪಂದವನ್ನು ಘೋಷಿಸುವ 17 ದಿನಗಳ ಮೊದಲು ಡಸಾಲ್ಟ್‌ನ ಮುಖ್ಯಸ್ಥ ಎರಿಕ್ ಟ್ರಪಿಯರ್ ಆಡಿರುವ ಮಾತುಗಳನ್ನು ಒಳಗೊಂಡ ವಿಡಿಯೊ ಟ್ವೀಟ್ ಮಾಡಿದೆ. ಈ ವಿಡಿಯೊದಲ್ಲಿ ‘ಜವಾಬ್ದಾರಿ ಹಂಚಿಕೆ ಸಂಬಂಧ ಎಚ್‌ಎಎಲ್ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದು ಎರಿಕ್ ಹೇಳಿರುವುದು ದಾಖಲಾಗಿದೆ. ‘ರಿಲಯನ್ಸ್‌ಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಮೋದಿ ಎಚ್‌ಎಎಲ್‌ಗೆ ದ್ರೋಹ ಎಸಗಿದರು’ ಎನ್ನುವುದು ಕಾಂಗ್ರೆಸ್ ಮಾಡುತ್ತಿರುವ ಆರೋಪ.

ಈ ಕುರಿತು ಪ್ರತಿಕ್ರಿಯಿಸಿರುವ ರಫೇಲ್ ಪ್ರತಿನಿಧಿ, ‘ರಫೇಲ್‌ 126 ಯುದ್ಧವಿಮಾನವು ಊರ್ಜಿತದಲ್ಲಿದೆ ಎಂದುಕೊಂಡು ಎರಿಕ್ ಹಾಗೆ ಮಾತನಾಡಿದರು. ರಕ್ಷಣಾ ಸಚಿವಾಲಯದ ಒಳಗೆ ನಡೆಯುತ್ತಿದ್ದ ಬೆಳವಣಿಗೆಗಳು ನಮಗೆ ಗೊತ್ತಿರಲಿಲ್ಲ’ ಎಂದು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮೋದಿ ವಿರುದ್ಧ ಅಂತರರಾಷ್ಟ್ರೀಯ ಸಂಚು

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎನ್ನುವ ಕಾಂಗ್ರೆಸ್‌ ಒತ್ತಾಯವನ್ನು ಸಾರಾಸಗಟಾಗಿ ತಿರಸ್ಕರಿಸುವ ಬಿಜೆಪಿ ‘ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ನಡೆಯುತ್ತಿರುವ ಆಂತರರಾಷ್ಟ್ರೀಯ ಸಂಚಿನ ಭಾಗವಾಗಿ ಕಾಂಗ್ರೆಸ್ ಇಂಥ ಒತ್ತಾಯ ಮಾಡುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ವೈರಿಗಳ ಎದುರು ತೆರೆದಿಡುವ ಇಂಥ ಯಾವುದೇ ತನಿಖೆಗೆ ನಾವು ಸಿದ್ಧರಿಲ್ಲ’ ಎಂದು ಹೇಳಿದೆ.

ಪಕ್ಷ ಮತ್ತು ಸರ್ಕಾರವನ್ನು ದೊಡ್ಡದನಿಯಲ್ಲಿ ಸಮರ್ಥಿಸಿಕೊಂಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ‘ಇದು ಗ್ರಹಿಕೆಯ ಯುದ್ಧ. ಕಾಂಗ್ರೆಸ್‌ನ ಈ ದುಸ್ಸಾಹಸದ ವಿರುದ್ಧ ನಾವು ದೇಶವ್ಯಾಪಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಜನರ ಮುಂದೆ ವಾಸ್ತವಾಂಶ ತೆರೆದಿಡುತ್ತೇವೆ. ಒಲಾಂಡ್ ಹೇಳಿಕೆಯು ರಾಹುಲ್‌ ಗಾಂಧಿ ಹೇಳಿಕೆಗೆ ತಾಳೆಯಾಗುತ್ತಿರುವುದು ಕೇವಲ ಕಾಕತಾಳೀಯವಲ್ಲ. ಇದರ ಹಿಂದೆ ದೊಡ್ಡ ಸಂಚು ಇದೆ’ ಎಂದು ಹರಿಹಾಯ್ದರು. ಈ ಮೊದಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಇದೇ ಆರೋಪ ಮಾಡಿದ್ದರು.

ಕೇಳಿಬಂತು ರಾಬರ್ಟ್‌ ವಾದ್ರಾ ಹೆಸರು

ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡಿರುವಕೇಂದ್ರ ಕೃಷಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ‘ಭಾರತೀಯ ವಾಯುಪಡೆಯ ಸ್ಥೈರ್ಯ ಕುಗ್ಗಿಸುವ ಮತ್ತು ದೇಶದ ರಕ್ಷಣಾ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಅಂತರರಾಷ್ಟ್ರೀಯ ಸಂಚಿನಲ್ಲಿ ರಾಹುಲ್‌ಗಾಂಧಿ ಭಾಗಿಯಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ರಫೇಲ್ ಒಪ್ಪಂದ ರದ್ದಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಪತಿ, ರಾಬರ್ಟ್ ವಾದ್ರಾ ಅವರ ಕೈವಾಡವಿದೆ. ತಮ್ಮ ಬಾವಮೈದುನನ ಆಪ್ತ, ಶಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮೂಲಕ ಒಪ್ಪಂದ ನಡೆಯಲಿಲ್ಲ ಎನ್ನುವ ಕಾರಣಕ್ಕೆ ರಾಹುಲ್ ಗಾಂಧಿ ಸಲ್ಲದ ಆರೋಪ ಮಾಡುತ್ತಿದ್ದಾರೆ. ಯುಪಿಎ ಸರ್ಕಾರ 126 ವಿಮಾನಗಳನ್ನು ಖರೀದಿಸುವ ನಿರ್ಧಾರದಿಂದ ಹಿಂದೆ ಸರಿಯಲು ಸಹ ರಾಬರ್ಟ್‌ ವಾದ್ರಾ ಕಾರಣ’ ಎಂದು ಹೇಳಿದ್ದಾರೆ.

‘ರಫೇಲ್ ಒಪ್ಪಂದ ರದ್ದಾಗಬೇಕು ಎಂದು ಬಯಸುತ್ತಿರುವ ಕಾಂಗ್ರೆಸ್ ದೇಶದ ಭದ್ರತೆಯ ಬಗ್ಗೆ ಆಲೋಚಿಸುತ್ತಿಲ್ಲ. ರಿಲಯನ್ಸ್ ಡಿಫೆನ್ಸ್ ಮತ್ತು ಎಎಎಲ್ ನಡುವೆ ಹೋಲಿಕೆ ಮಾಡುತ್ತಾ ಜನರಲ್ಲಿ ಗೊಂದಲ ಬಿತ್ತುತ್ತಿದೆ. ಇದಕ್ಕೆಂದೇ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತಿದೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.