ADVERTISEMENT

ರಫೇಲ್ ಸೇರ್ಪಡೆ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ₹41 ಲಕ್ಷ: ರಕ್ಷಣಾ ಸಚಿವ

ಪಿಟಿಐ
Published 8 ಫೆಬ್ರುವರಿ 2021, 11:54 IST
Last Updated 8 ಫೆಬ್ರುವರಿ 2021, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಬಾಲಾ ವಾಯುಪಡೆಯಲ್ಲಿ ನಡೆದ ಐದು ಹೊಸ ರಫೇಲ್‌ ಯುದ್ಧ ವಿಮಾನಗಳನ್ನು ವಾಯುಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ₹ 41 ಲಕ್ಷ ಖರ್ಚಾಗಿದ್ದು, ಅದರಲ್ಲಿ ₹ 9.18 ಲಕ್ಷ ಜಿಎಸ್‌ಟಿಯೂ ಸೇರಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸೋಮವಾರ ರಾಜ್ಯಸಭೆಗೆ ತಿಳಿಸಿದರು.

‘ಮೊದಲ ಐದು ರಫೇಲ್ ಯುದ್ಧ ವಿಮಾನಗಳನ್ನು ಸೆ.10ರಂದು ಔಪಚಾರಿಕವಾಗಿ ವಾಯುಪಡೆಗೆ ಸೇರಿಸಲಾಯಿತು. ಆ ಕಾರ್ಯಕ್ರಮವನ್ನು ಭಾರತೀಯ ವಾಯುಪಡೆಯ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ₹ 41.32 ಲಕ್ಷ ಖರ್ಚಾಗಿತ್ತು. ₹ 9.18 ಲಕ್ಷ ಜಿಎಸ್‌ಟಿ ಸೇರಿತ್ತು‘ ಎಂದು ಅವರು ಹೇಳಿದರು.

‘ಎಲ್ಲಾ ಹೊಸ ರೂಪದ ಯುದ್ಧ ವಿಮಾನಗಳನ್ನು ಸಾಂಪ್ರದಾಯಿಕವಾಗಿ ಭಾರತೀಯ ವಾಯುಪಡೆಗೆ ‘ಸೂಕ್ತ ಸಮಾರಂಭ‘ ದ ಮೂಲಕವೇ ಸೇರ್ಪಡೆಗೊಳಿಸಲಾಗುತ್ತದೆ ಎಂದು ಸಿಂಗ್ ಹೇಳಿದರು.

ADVERTISEMENT

ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಸಮಾರಂಭದಲ್ಲಿ ಫ್ರಾನ್ಸ್‌ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಮತ್ತು ವಿಮಾನದ ತಯಾರಕರಾದ ಫ್ರೆಂಚ್ ಏರೋಸ್ಪೇಸ್ ಪ್ರಮುಖ ಡಸಾಲ್ಟ್ ಏವಿಯೇಷನ್‌ನ ಉನ್ನತ ಮಟ್ಟದವರು ಭಾಗವಹಿಸಿದ್ದರು.

ಕಳೆದ ವರ್ಷದ ಜುಲೈ 29ರಂದು ಮೊದಲ ತಂಡದಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದವು. ನವೆಂಬರ್ 3ರಂದು ಎರಡನೇ ತಂಡದಲ್ಲಿ ಮೂರು ನಂತರ ಈ ವರ್ಷದ ಜನವರಿ 27ರಂದು ಮೂರನೇ ತಂಡದಲ್ಲಿ ಮೂರು ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡವು.

ಭಾರತ – ಫ್ರಾನ್ಸ್ ನಡುವೆ ₹ 59 ಸಾವಿರ ಕೋಟಿ ಮೊತ್ತದ 36 ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿ ನಾಲ್ಕು ವರ್ಷಗಳ ಯುದ್ಧ ವಿಮಾನಗಳು ಭಾರತಕ್ಕೆ ಬಂದವು.

ಯುದ್ಧ ವಿಮಾನಗಳು ದೇಶಕ್ಕೆ ಆಗಮಿಸಿದ ಆರು ವಾರಗಳ ನಂತರ ವಾಯುಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸುವ ಸಮಾರಂಭವು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.