ADVERTISEMENT

ದೆಹಲಿ ವೈದ್ಯರ ವಿರುದ್ಧ ಪೊಲೀಸರ ವರ್ತನೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಖಂಡನೆ

ಪಿಟಿಐ
Published 28 ಡಿಸೆಂಬರ್ 2021, 5:27 IST
Last Updated 28 ಡಿಸೆಂಬರ್ 2021, 5:27 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಎನ್‌ಇಇಟಿ–ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ಪ್ರತಿಭಟನೆ ನಡೆಸಿದ ವೈದ್ಯರ ವಿರುದ್ಧದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

‘ವೈದ್ಯರ ಮೇಲೆ ಹೂವಿನ ದಳಗಳನ್ನು ಸುರಿಸಲಾಗಿತ್ತು. ವಾಸ್ತವದಲ್ಲಿ ಅವರ ಮೇಲೆ ಅನ್ಯಾಯದ ಮಳೆಯಾಗುತ್ತಿದೆ. ನಾನು ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ಧ ಕೋವಿಡ್ ವಾರಿಯರ್ಸ್ ಜೊತೆ ನಿಲ್ಲುತ್ತೇನೆ’ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ಕೊರೊನಾ ಕಾಲದಲ್ಲಿ, ಈ ಯುವ ವೈದ್ಯರು ತಮ್ಮ ಪ್ರೀತಿ ಪಾತ್ರರಿಂದ ದೂರಾಗಿ ಇಡೀ ದೇಶದ ಜನರ ಪರ ನಿಂತಿದ್ದರು. ಇದು ವೈದ್ಯರ ಪರ ನಿಲ್ಲುವ ಸಮಯ . ಅವರ ಸೇವೆಯನ್ನು ಕಡೆಗಣಿಸಿ ಪೊಲೀಸ್ ಬಲಪ್ರಯೋಗ ಮಾಡಿದ ನರೇಂದ್ರಮೋದಿಯವರು ಎಚ್ಚರಗೊಳ್ಳಬೇಕು’ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ADVERTISEMENT

ಎನ್‌ಇಇಟಿ-ಪಿಜಿ 2021 ಕೌನ್ಸೆಲಿಂಗ್‌ನಲ್ಲಿನ ವಿಳಂಬದ ಕುರಿತು ಸೋಮವಾರ ಸರ್ಕಾರಿ ಆಸ್ಪತ್ರೆಗಳ ನಿವಾಸಿ ವೈದ್ಯರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಕೇಂದ್ರ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಿದರು.

ಆದರೆ, ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರಿಂದ ಮಾತಿನ ಚಕಮಕಿ ನಡೆಯಿತು. ಕನಿಷ್ಠ 12 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು.

ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಎಫ್‌ಒಆರ್‌ಡಿಎ) ಕಳೆದ ಹಲವು ದಿನಗಳಿಂದ ಪ್ರತಿಭಟನೆಯ ನೇತೃತ್ವ ವಹಿಸುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಅವರ ಪ್ರಯತ್ನದ ಕೃತಜ್ಞತೆಯ ಸೂಚಕವಾಗಿ ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಸರ್ಕಾರವು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹೂವನ್ನು ಸುರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.