ADVERTISEMENT

ಉದ್ಯಮಿಗಳಿಗಿಂತ ರೈತ ಕೀಳೇ: ರಾಹುಲ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 17:47 IST
Last Updated 11 ಜುಲೈ 2019, 17:47 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ದೇಶದ ರೈತರು ‘ಶ್ರೀಮಂತ ಉದ್ಯಮಿ’ಗಳಿಗಿಂತ ಕೀಳು ಎಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾವಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಗುರುವಾರ ಆರೋಪಿಸಿದರು.

ಹೊಸದಾಗಿ ರಚನೆಗೊಂಡ 17ನೇ ಲೋಕಸಭೆಯಲ್ಲಿ ರಾಹುಲ್‌ ಮೊದಲ ಬಾರಿ ಮಾತನಾಡಿದರು. ರೈತರು ಸಾಲದ ಹೊರೆಯಲ್ಲಿ ತತ್ತರಿಸಲು ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಪ್ರತಿಪಾದಿಸಿದರು.ರೈತರ ಸಂಕಷ್ಟ ನೀಗುವುದಕ್ಕೆ ಬಜೆಟ್‌ನಲ್ಲಿ ಯಾವುದೇ ಗಟ್ಟಿ ಕ್ರಮಗಳು ಇಲ್ಲ ಎಂಬುದನ್ನು ನೋಡಿ ಬೇಸರವಾಗಿದೆ ಎಂದು ಅವರು ಹೇಳಿದರು. ಆದರೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ರಾಹುಲ್‌ ಆರೋಪವನ್ನು ತಳ್ಳಿ ಹಾಕಿದರು. ಈ ಪರಿಸ್ಥಿತಿಗೆ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದರು.

ಬಿಜೆಪಿ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಶ್ರೀಮಂತ ಉದ್ಯಮಿಗಳಿಗೆ ₹4.3 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ₹5.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಇಂತಹ ನಾಚಿಕೆಗೇಡಿನ ದ್ವಂದ್ವ ನೀತಿ ಯಾಕೆ? ನಮ್ಮ ರೈತರು ಶ್ರೀಮಂತರಿಗಿಂತ ಕೀಳು ಎಂದು ಸರ್ಕಾರ ಭಾವಿಸಿರುವುದು ಯಾಕೆ ಎಂದು ರಾಹುಲ್‌ ಪ್ರಶ್ನಿಸಿದರು.

ADVERTISEMENT

**

ಸಾಲಾವಧಿ ವಿಸ್ತರಿಸಲು ಕೇರಳ ಸರ್ಕಾರ ಕೋರಿದ್ದು, ಇದನ್ನು ಅಂಗೀಕರಿಸಲು ಆರ್‌ಬಿಐಗೆ ಸೂಚಿಸಬೇಕು. ಬ್ಯಾಂಕುಗಳು ರೈತರಿಗೆ ನೋಟಿಸ್‌ ನೀಡದಂತೆ ನೋಡಿಕೊಳ್ಳಬೇಕು.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

**

ಕಳೆದ ಒಂದೆರಡು ವರ್ಷದಲ್ಲಿ ರೈತರ ಪರಿಸ್ಥಿತಿ ಕಂಗೆಟ್ಟಿದ್ದಲ್ಲ. ದೀರ್ಘ ಕಾಲ ದೇಶವನ್ನು ಆಳಿದ ಪಕ್ಷವು ಇದಕ್ಕೆ ಹೊಣೆ. ಹಿಂದೆಂದೂ ಇಲ್ಲದ ಮಟ್ಟಕ್ಕೆ ಕನಿಷ್ಠ ಬೆಂಬಲ ಬೆಲೆ ಪ್ರಮಾಣವನ್ನು ಈಗ ಏರಿಸಲಾಗಿದೆ.
-ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.