ADVERTISEMENT

ರಾಹುಲ್‌ಗೆ ಲೋಕಸಭೆಯಲ್ಲಿ ಮೊದಲ ಸಾಲಿನ ಸೀಟು ಕೇಳಲ್ಲ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:27 IST
Last Updated 10 ಜುಲೈ 2019, 18:27 IST
ಅಮೇಠಿಯಲ್ಲಿ ಪಕ್ಷದ ಕಾರ್ಯಕರ್ತರ ಮಾತಿಗೆ ಕಿವಿಯಾದ ರಾಹುಲ್‌  ಪಿಟಿಐ ಚಿತ್ರ
ಅಮೇಠಿಯಲ್ಲಿ ಪಕ್ಷದ ಕಾರ್ಯಕರ್ತರ ಮಾತಿಗೆ ಕಿವಿಯಾದ ರಾಹುಲ್‌ ಪಿಟಿಐ ಚಿತ್ರ   

ನವದೆಹಲಿ:ರಾಹುಲ್ ಗಾಂಧಿ ಅವರಿಗೆ ಲೋಕಸಭೆಯಲ್ಲಿ ಮುಂದಿನ ಸಾಲಿನ ಸೀಟು ಕೇಳುವುದಿಲ್ಲ ಎಂದು ಕಾಂಗ್ರೆಸ್ ಬುಧವಾರ ಸ್ಪಷ್ಟಪಡಿಸಿದೆ.

ಈ ಕುರಿತ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ‘ರಾಹುಲ್ ಅವರಿಗೆ 466ನೇ ಸೀಟು ನೀಡುವಂತೆ ಪ್ರಸ್ತಾಪಿಸಲಾಗಿದೆ. ಮೊದಲ ಸಾಲಿನ ಸೀಟಿಗೆ ಬೇಡಿಕೆಯಿಡಲಾಗಿದೆ ಎಂಬುದು ಸುಳ್ಳು ಸುದ್ದಿ’ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಲೋಕಸಭೆಯಲ್ಲೂ ರಾಹುಲ್ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಕ್ಷಗಳ ಸಂಖ್ಯಾಬಲ ಆಧರಿಸಿ ಮುಂದಿನ ಸಾಲು ನಿಗದಿಪಡಿಸಲಾಗುತ್ತದೆ. ಈ ಬಾರಿ ಕಾಂಗ್ರೆಸ್‌ಗೆ 2 ಸೀಟುಗಳು ಲಭ್ಯವಾಗಿದ್ದು, ಇವುಗಳನ್ನು ಅಧಿರ್ ರಂಜನ್ ಚೌಧರಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮೀಸಲಿಡಲಾಗಿದೆ.

ADVERTISEMENT

ಡಿಎಂಕೆ ಪಕ್ಷದ ಟಿ.ಆರ್. ಬಾಲು, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಮೊದಲ ಸಾಲು ಸಿಗುವ ಸಾಧ್ಯತೆಯಿದೆ.

ಆಡಳಿತ ಪಕ್ಷದ ಸಾಲಿನಲ್ಲಿ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ಬಳಿಕ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಹಾಗೂ ಡಿ.ವಿ. ಸದಾನಂದ ಗೌಡ ಅವರಿಗೆ ಆಸನ ನೀಡಲಾಗಿದೆ.

ಟ್ವಿಟರ್‌ನಲ್ಲಿ ಕೋಟಿ ಫಾಲೋಯರ್ಸ್‌
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫಾಲೋಯರ್ಸ್‌ ಸಂಖ್ಯೆ ಕೋಟಿ ದಾಟಿದೆ.

ಈ ಮೈಲುಗಲ್ಲು ತಲುಪಲು ಕಾರಣರಾದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ. ಅಮೇಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರ ಜೊತೆಈ ಸಂಭ್ರಮವನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರ ಪೈಕಿ ಶಶಿ ತರೂರ್‌ ಅವರುಕಳೆದ ವರ್ಷ ಅತಿಹೆಚ್ಚು ಫಾಲೋಯರ್ಸ್‌ ಹೊಂದಿದ್ದರು. ಸದ್ಯ ತರೂರ್ ಹಿಂಬಾಲಕರ ಸಂಖ್ಯೆ 69 ಲಕ್ಷ.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ನಾಯಕರಿಗಿಂತ ಮುಂದಿದ್ದು, ಅವರ ಫಾಲೋಯರ್‌ಗಳ ಸಂಖ್ಯೆ 4.8 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.