ನವದೆಹಲಿ: ಭಾರತವನ್ನು ಕೇವಲ ಭೂಪ್ರದೇಶ ಎಂದಷ್ಟೇ ಭಾವಿಸಿರುವ ಬಿಜೆಪಿ ಮತ್ತು ಆರ್‌ಎಸ್ಎಸ್ ಧ್ರುವೀಕರಣದ ರಾಜಕೀಯ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ ಕಾನ್‌ಕ್ಲೇವ್’ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾನತೆಯಲ್ಲಿ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.
‘ಭಾರತವು ಅದರ ಜನರಿಗೆ ಸೇರಿದ ರಾಷ್ಟ್ರ ಎಂದು ನಾವು ಭಾವಿಸುತ್ತೇವೆ. ಆದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶವನ್ನು ಕೇವಲ ಭೂಭಾಗ ಎಂದಷ್ಟೇ ಪರಿಗಣಿಸಿವೆ. ದೇಶವು ಅವರ ಪಾಲಿಗೆ ಕೆಲವೇ ಕೆಲವು ವ್ಯಕ್ತಿಗಳಿಗೆ ‘ಕರ್ಮ’ಕ್ಕೆ ಅನುಸಾರವಾಗಿ ಹಂಚಿಕೆ ಮಾಡಲಿರುವ ‘ಚಿನ್ನದ ಪಕ್ಷಿ’. ನಾವು ಎಲ್ಲರನ್ನೂ ಸಮಾನವಾಗಿ ಕಾಣುವುದರಲ್ಲಿ ನಂಬಿಕೆ ಇರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಜಾಗತಿಕ ಮಟ್ಟದಲ್ಲಿಯೇ ಭಾರತದಲ್ಲಿ ಪ್ರಜಾಪ್ರಭುತ್ವ ಚೆನ್ನಾಗಿದೆ. ನಾವು ಅದನ್ನು ಉಳಿಸಿಕೊಂಡುಬಂದಿದ್ದೇವೆ. ಒಂದು ವೇಳೆ ಅದು ಅಸ್ತಿತ್ವ ಕಳೆದುಕೊಳ್ಳಲು ಆರಂಭವಾದರೆ ಇಡೀ ಜಗತ್ತಿಗೇ ತೊಂದರೆಯಾಗಲಿದೆ’ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನವು ದಾಳಿ ಎದುರಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಯಾರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿಲ್ಲ. ಅವರು ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ರಾಹುಲ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.