ADVERTISEMENT

ಪರಿಶ್ರಮದಿಂದ ಏಳಿಗೆ: ವಿದ್ಯಾರ್ಥಿಗಳಿಗೆ ರಾಹುಲ್‌ ಗಾಂಧಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 16:15 IST
Last Updated 8 ಫೆಬ್ರುವರಿ 2026, 16:15 IST
<div class="paragraphs"><p>ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಎನ್‌ಆರ್‌ಐ ವಿದ್ಯಾರ್ಥಿಗಳ ಗುಂಪಿನ ಜತೆ ಸಂವಾದ ನಡೆಸಿದರು –</p></div>

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಎನ್‌ಆರ್‌ಐ ವಿದ್ಯಾರ್ಥಿಗಳ ಗುಂಪಿನ ಜತೆ ಸಂವಾದ ನಡೆಸಿದರು –

   

ಪಿಟಿಐ ಚಿತ್ರ  

ನವದೆಹಲಿ: ‘ಇತರರು ನಿಮ್ಮ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಆತಂಕಗೊಳ್ಳಬೇಡಿ, ಸರಿಯಾದ ಕೆಲಸ ಮಾಡಬೇಕು ಎಂಬುದಷ್ಟೇ ನಿಮ್ಮ ಆಲೋಚನೆಯಾಗಿರಲಿ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು. 

ADVERTISEMENT

‘ನಿಮ್ಮ ಬಗ್ಗೆ ಜಗತ್ತು ಏನನ್ನಾದರೂ ಹೇಳಬಹುದು. ನೀವು ಯಾರು ಎಂಬುದನ್ನು ಹೇಳಲೂ ಪ್ರಯತ್ನಿಸಬಹುದು. ಆದರೆ ನಿಜವಾಗಿಯೂ ಮುಖ್ಯವಾದದ್ದು ಏನೆಂದರೆ, ನೀವು ಸತ್ಯದ ಹಾದಿಯಲ್ಲಿದ್ದೀರಿ ಎಂಬುದು ನಿಮಗೆ ಸ್ಪಷ್ಟವಾಗಿರಬೇಕು. ಜೀವನದಲ್ಲಿ ಹೀಗೆಯೇ ಆಗಬೇಕು ಎಂಬುದೇನೂ ಇರುವುದಿಲ್ಲ. ನಮ್ಯತೆ ಮತ್ತು ಪರಿಶ್ರಮದಿಂದಲೇ ಏಳಿಗೆ ಸಾಧ್ಯ’ ಎಂದು ಅವರು ಸಲಹೆ ನೀಡಿದರು. 

ಎನ್‌ಆರ್‌ಐ ವಿದ್ಯಾರ್ಥಿಗಳ ಗುಂಪಿನ ಜತೆ ಸಂವಾದ ನಡೆಸಿದ ಅವರು ಯುವ ಜನರಲ್ಲಿನ ಆತಂಕ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ಕುರಿತ ವಿಡಿಯೊವನ್ನು ಅವರು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. 

ಆತ್ಮವಿಶ್ವಾಸದ ಕೊರತೆ, ತಮ್ಮನ್ನು ಇತರರು ನಿರ್ಣಯಿಸುವುದು ಹಾಗೂ ಅಭದ್ರತೆಗಳ ಕುರಿತು ತಾವು ಎದುರಿಸುತ್ತಿರುವ ಆತಂಕಗಳನ್ನು ವಿದ್ಯಾರ್ಥಿಗಳು ಈ ವೇಳೆ ರಾಹುಲ್‌ ಅವರ ಗಮನಕ್ಕೆ ತಂದರು.  

‘ಇಷ್ಟಪಡದವರೂ ಇರುತ್ತಾರೆ’: 

‘ಸಮಾಜವು ನಿಮ್ಮ ಬಗ್ಗೆ ತೀರ್ಪುಗಳನ್ನು ನೀಡಬಹುದು. ಬಹುಷಃ ಆ ಸಮಾಜ ನಿಮ್ಮನ್ನು ಆತಂಕ ಮತ್ತು ಅನಾನುಕೂಲತೆಯಲ್ಲಿಯೇ ಇರಬೇಕು ಎಂದು ಬಯಸಬಹುದು. ಅಂದರೆ, ನಿಮ್ಮನ್ನು ಇಷ್ಟಪಡದವರೂ ಇರುತ್ತಾರೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬೇಕು’ ಎಂದು ಅವರು ಹೇಳಿದರು.   

‘ನನ್ನನ್ನೂ ಯಾವಾಗಲೂ ಹೀಗೆಯೇ ನಿರ್ಣಯಿಸಲಾಗುತ್ತದೆ. ಆದರೆ ನಾನು ಇವುಗಳ ಬಗ್ಗೆ ಗಮನ ಕೊಡುವುದಿಲ್ಲ. ಸರಿಯಾದ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಆಲೋಚನೆ’ ಎಂದು ಅವರು ತಿಳಿಸಿದರು.

ಸತ್ಯ, ಅಹಿಂಸೆ ಪ್ರಮುಖ ಮೌಲ್ಯಗಳು:

‘ಸತ್ಯ ಮತ್ತು ಅಹಿಂಸೆ ಪ್ರಮುಖವಾದ ಮೌಲ್ಯಗಳಾಗಿದ್ದು, ಅವುಗಳನ್ನು ಪಾಲಿಸಿ. ಇತರರಿಗೆ ಅಥವಾ ನಿಮಗೆ ಹಿಂಸಾತ್ಮಕವಾಗಿ ಇರಬೇಡಿ. ಅದೇ ವೇಳೆ ಇತರರಿಗೆ ಮತ್ತು ನಿಮಗೆ ಸತ್ಯವಾಗಿರಿ. ಇದಿಷ್ಟಿದ್ದರೆ ಬೇರೆ ಅಗತ್ಯವಿರುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಯಾವುದೇ ಪರಿಸ್ಥಿತಿಯಲ್ಲಿ ಆತಂಕಗೊಳ್ಳಬೇಡಿ, ಇತರರ ಬಗ್ಗೆ ಪ್ರೀತಿ, ವಾತ್ಸಲ್ಯದಿಂದ ಜೀವನ ಮುನ್ನಡೆಸಿ’ ಎಂದು ರಾಹುಲ್‌ ಅವರು ವಿದ್ಯಾರ್ಥಿಗಳಿಗೆ ಯಶಸ್ಸಿನ ಬಗ್ಗೆ ತಿಳಿಸಿದರು. ‘ನಾನು ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿರಬಹುದು, ಅತ್ಯಂತ ಶ್ರೀಮಂತನೇ ಆಗಿರಬಹುದು, ಆದರೆ ಸುತ್ತಮುತ್ತಲಿನ ಜನರ ಬಗ್ಗೆ ನನ್ನಲ್ಲಿ ಗೌರವ ಇಲ್ಲದಿದ್ದರೆ ಅದು ಯಶಸ್ಸು ಎನಿಸಿಕೊಳ್ಳುವುದಿಲ್ಲ’ ಎಂದು ಅವರು ವಿವರಿಸಿದರು. 

‘ಜೀವನದಲ್ಲಿ ಎಲ್ಲವೂ ಸರಳವಾಗಿ ಹೋಗುವುದಿಲ್ಲ. ನಮ್ಯತೆ ಮತ್ತು ಪರಿಶ್ರಮ ಅತ್ಯಗತ್ಯವಾಗಿ ಇರಬೇಕಾದ ಗುಣಗಳು’ ಎಂದು ಅವರು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.