ನವದೆಹಲಿ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರು ದೇಶದೊಳಕ್ಕೆ ತಮ್ಮ ಅಜೆಂಡಾ ನುಗ್ಗಿಸಲು ಪ್ರಯತ್ನಿಸುತ್ತಿರುವ ಭಾರತ ವಿರೋಧಿ ಶಕ್ತಿಗಳ ಧ್ವಜಧಾರಿಯಾಗಿದ್ದಾರೆ ಎಂದು ಆರೋಪಿಸಿದೆ. ಜನರು ಅವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಕರೆ ನೀಡಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಕೊಲಂಬಿಯಾದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದರು. 100 ವರ್ಷಗಳಿಗೂ ಹೆಚ್ಚು ಕಾಲ ನೆಹರೂ-ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಈಗ ಭಾರತ ವಿರೋಧಿ ಶಕ್ತಿಗಳ ಹಿಡಿತಕ್ಕೆ ಸಿಲುಕುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಕೊಲಂಬಿಯಾದ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಹೇಳಿಕೆಗಳನ್ನು ಉಲ್ಲೇಖಿಸಿದ ತ್ರಿವೇದಿ, ಭಾರತದಲ್ಲಿ 16-17 ಭಾಷೆಗಳಿವೆ ಎಂದು ರಾಹುಲ್ ಹೇಳಿದ್ದು, ಭಾಷಾ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಉತ್ತರ-ದಕ್ಷಿಣ ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಗಳು ನಡೆದಿವೆ ಎಂದು ದೂರಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಭಾರತ ವಿರೋಧಿ ಶಕ್ತಿಗಳ ಧ್ವಜಧಾರಿ ಆಗಿದ್ದಾರೆ. ಜನರು ಅವರು ಮತ್ತು ನೆಹರು-ಗಾಂಧಿ ಕುಟುಂಬದ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ತ್ರಿವೇದಿ ಮನವಿ ಮಾಡಿದ್ದಾರೆ.
'ಇಂದು ಅವರಂತಹ ವಿರೋಧ ಪಕ್ಷದ ನಾಯಕನನ್ನು ಹೊಂದಿರುವುದು ಭಾರತೀಯ ಪ್ರಜಾಪ್ರಭುತ್ವದ ಹೃದಯಕ್ಕೆ ಮುಳ್ಳಿನಂತೆ ಕಾಣುತ್ತಿದೆ' ಎಂದಿದ್ದಾರೆ.
'ಪಕ್ಷವು ಅಪಾಯಕಾರಿ ವಿದೇಶಿ ಶಕ್ತಿಗಳ ಹಿಡಿತಕ್ಕೆ ಸಿಲುಕುತ್ತಿದೆ ಎಂದು ತಿಳಿದೂ ಸುಮ್ಮನಿರುವ ಕಾಂಗ್ರೆಸ್ ನಾಯಕರು ದೇಶದ್ರೋಹ ಎಸಗುತ್ತಿದ್ದಾರೆ’ ಎಂದು ದೂರಿದ್ದಾರೆ.
ಕಾಂಗ್ರೆಸ್‌ಗೆ ಪ್ರಬುದ್ಧ ನಾಯಕತ್ವವಿದ್ದ ಕಾಲವಿತ್ತು ಎಂದ ತ್ರಿವೇದಿ, ಇಂದು ಕಾಂಗ್ರೆಸ್ ನಾಯಕತ್ವವು ತುಂಬಾ ಅಪಕ್ವವಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.