ADVERTISEMENT

ಪ್ರಧಾನಿ ಮೋದಿ ಜನ್ಮದಿನ: ರಾಹುಲ್, ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರಿಂದ ಶುಭಾಶಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 4:03 IST
Last Updated 17 ಸೆಪ್ಟೆಂಬರ್ 2020, 4:03 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ70ನೇ ಜನ್ಮದಿನದ ಅಂಗವಾಗಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕಗಣ್ಯರು ಶುಭ ಕೋರಿದ್ದಾರೆ.

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು,‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಆತ್ಮೀಯ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಲಭಿಸಲೆಂದು ಪ್ರಾರ್ಥಿಸುತ್ತೇನೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

‘ನರೇಂದ್ರ ಮೋದಿ ಸರ್‌, ನಿಮಗೆ ಹುಟ್ಟಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಅಂತ್ಯೋದಯದಿಂದ ರಾಷ್ಟ್ರೋದಯದ ವರೆಗಿನ ಪರಿಕಲ್ಪನೆಗಳನ್ನು ಪೂರ್ಣಗೊಳಿಸಿದಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ‌ ರಾಮನ ಆಶೀರ್ವಾದದೊಂದಿಗೆ, ಒಂದೇ ಭಾರತ; ಶ್ರೇಷ್ಠ ಭಾರತ ಗುರಿಯನ್ನು ಉತ್ತೇಜಿಸಿ ಭಾರತ ಮಾತೆಗೆ ನೀವು ಹೆಮ್ಮೆ ತರುತ್ತೀರಿ’ ಎಂದು ತಿಳಿಸಿದ್ದಾರೆ.

‘ರಾಷ್ಟ್ರ ಹಾಗೂ ಜನರ ಕಲ್ಯಾಣಕ್ಕಾಗಿ ಆದ್ಯತೆ ನೀಡಿದವರು, ಕರ್ಮಯೋಗಿ, ರಾಷ್ಟ್ರ ನಿರ್ಮಾಣಕ್ಕಾಗಿ ಪಟ್ಟು ಬಿಡದೆ ಶ್ರಮಿಸುತ್ತಿರುವವರು ಮತ್ತು ತಾಯಿ ಭಾರತಾಂಬೆಯ ನಿಜವಾದ ಸೇವಕ ಪ್ರಧಾನಿ ನರೇಂದ್ರೆ ಮೋದಿ ಜೀ ಅವರಿಗೆ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಮೋದಿ ಅವರ 70ನೇ ಜನ್ಮದಿನದ ಅಂಗವಾಗಿ ಬಿಜೆಪಿಯು ಇದೇ ತಿಂಗಳ 14ರಿಂದ 20ರ ವರೆಗೆ ‘ಸೇವಾ ಸಪ್ತಾಹ’ವನ್ನು ಆಯೋಜಿಸಿದೆ. ಈ ‘...ಸಪ್ತಾಹ’ದ ಭಾಗವಾಗಿ ಪಕ್ಷವು ದೇಶದಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ‘ಸೇವಾ ಸಪ್ತಾಹ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.