ADVERTISEMENT

ಬಿಹಾರದಲ್ಲಿ ಅಕ್ರಮ ನಡೆಯಲು ಬಿಡೆವು: ಅಧಿಕಾರ ಯಾತ್ರೆಯಲ್ಲಿ ರಾಹುಲ್‌

‘ಮತದಾರನ ಅಧಿಕಾರ ಯಾತ್ರೆ’ಗೆ ಬಿಹಾರದಲ್ಲಿ ಚಾಲನೆ ನೀಡಿದ ರಾಹುಲ್‌ ಗಾಂಧಿ

ಪಿಟಿಐ
Published 17 ಆಗಸ್ಟ್ 2025, 14:25 IST
Last Updated 17 ಆಗಸ್ಟ್ 2025, 14:25 IST
ಬಿಹಾರದಲ್ಲಿ ಭಾನುವಾರ ಆರಂಭಗೊಂಡ ‘ಮತದಾರನ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ‘ಇಂಡಿಯಾ’ ಕೂಟದ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು –ಪಿಟಿಐ ಚಿತ್ರ
ಬಿಹಾರದಲ್ಲಿ ಭಾನುವಾರ ಆರಂಭಗೊಂಡ ‘ಮತದಾರನ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ‘ಇಂಡಿಯಾ’ ಕೂಟದ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು –ಪಿಟಿಐ ಚಿತ್ರ   

ಸಾಸಾರಾಮ್ (ಬಿಹಾರ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ‘ಒಬ್ಬರಿಗೆ ಒಂದು ಮತ’ ಎಂಬ ಪ್ರತಿಪಾದನೆಯೊಂದಿಗೆ ‘ಮತದಾರನ ಅಧಿಕಾರ ಯಾತ್ರೆ’ಗೆ  ಬಿಹಾರದ ಸಾಸಾರಾಮ್‌ನಲ್ಲಿ ಭಾನುವಾರ ಚಾಲನೆ ನೀಡಿದರು.

ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣೆಗಳಲ್ಲಿ ಅಕ್ರಮ ನಡೆಸಿದೆ ಎಂಬುದು ಇಡೀ ದೇಶದ ಜನತೆಗೆ ತಿಳಿದಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಡೆಸಿದ್ದ ಅಕ್ರಮವನ್ನು  ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ನಡೆಸಲು ‘ಇಂಡಿಯಾ’ ಕೂಟ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ದೇಶದಾದ್ಯಂತ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ. ಇದೀಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೂಲಕ ಮತದಾರರನ್ನು ಸೇರಿಸುವ ಮತ್ತು ಅಳಿಸಿಹಾಕುವ ಸಂಚು ರೂಪಿಸಿ, ಚುನಾವಣಾ ಅಕ್ರಮಕ್ಕೆ ಆಯೋಗ ಮುಂದಾಗಿದೆ ಎಂದು ಆರೋಪಿಸಿದರು.

ADVERTISEMENT

‘ಚುನಾವಣಾ ಆಯೋಗದಿಂದ ‘ಮತ ಕಳವು’ ಹೇಗೆ ನಡೆಯುತ್ತಿದೆ ಎಂಬುದನ್ನು ಕೆಲವೇ ದಿನಗಳ ಹಿಂದಷ್ಟೆ ಮಾಧ್ಯಮಗೋಷ್ಠಿ ಮೂಲಕ ಬಹಿರಂಗಪಡಿಸಿದ್ದೇನೆ. ಇದು ಸಂವಿಧಾನ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಂವಿಧಾನದ ನಾಶಕ್ಕೆ ಯತ್ನಿಸುತ್ತಿವೆ’ ಎಂದು ಹರಿಹಾಯ್ದರು.

‘ಪ್ರತಿ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಕೂಟ ಗೆಲುವು ಸಾಧಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಇಂಡಿಯಾ ಕೂಟ ಗೆದ್ದಿತ್ತು. ಆದರೆ ಮಹಾರಾಷ್ಟ್ರದಲ್ಲಿ ಒಂದು ಕೋಟಿ ಮತದಾರರನ್ನು ಸೇರ್ಪಡೆ ಮಾಡಿದ ಪರಿಣಾಮವಾಗಿ ನಾಲ್ಕು ತಿಂಗಳ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿತು’ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, ಸಿಪಿಎಂಎಲ್‌ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ, ಸಿಪಿಎಂನ ಸುಭಾಷಿಣಿ ಅಲಿ ಮತ್ತು ಸಿಪಿಐನ ಸಂತೋಷ್‌ ಕುಮಾರ್‌ ಮತ್ತಿತರರು ಯಾತ್ರೆಯಲ್ಲಿ ಭಾಗಿಯಾಗಿದ್ದರು.

ಬಿಹಾರ ವಿಧಾನಸಭೆ ಚುನಾವಣೆಗೆ ಮೂರು ತಿಂಗಳಷ್ಟೇ ಇರುವ ಹೊತ್ತಿನಲ್ಲಿ ರಾಹುಲ್‌ ಅವರು ಯಾತ್ರೆ ಆರಂಭಿಸಿದ್ದಾರೆ. 

ಯಾತ್ರೆಯು ಕಾಲ್ನಡಿಗೆಯ ಜೊತೆಗೆ ವಾಹನವನ್ನೂ ಬಳಸಲಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆಸಿದ್ದ ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿಯೂ ಇದೇ ಮಾದರಿ ಅನುಸರಿಸಲಾಗಿತ್ತು. 

ಯಾತ್ರೆಯು ಸಂವಿಧಾನವನ್ನು ರಕ್ಷಿಸುತ್ತದೆ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುತ್ತದೆ ಮತ್ತು ಪ್ರಜೆಗಳ ಹಕ್ಕನ್ನು ರಕ್ಷಿಸುತ್ತದೆ
ಜೈರಾಮ್ ರಮೇಶ್‌ ಕಾಂಗ್ರೆಸ್‌ ನಾಯಕ

ಪ್ರಜಾಪ್ರಭುತ್ವ ರಕ್ಷಣೆಯ ಯಾತ್ರೆ: ಕಾಂಗ್ರೆಸ್ ‘ಮತದಾರನ ಅಧಿಕಾರ ಯಾತ್ರೆ’ಯು ಮತ್ತೊಂದು ರಾಜಕೀಯ ಯಾತ್ರೆ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ರಕ್ಷಣೆಗಾಗಿ ನಡೆಸುತ್ತಿರುವ ನೈತಿಕ ಮತ್ತು ಸಂವಿಧಾನಾತ್ಮಕ ಚಳವಳಿ ಎಂದು ಕಾಂಗ್ರೆಸ್‌ ಹೇಳಿದೆ.

ದುರ್ಬಲ ಸಮುದಾಯಗಳ ಧ್ವನಿಯನ್ನು ವಂಚನೆ ಮಾರ್ಗದ ಮೂಲಕ ಕಿತ್ತುಕೊಳ್ಳಲು ಇಂಡಿಯಾ ಒಕ್ಕೂಟ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ‘ಎಕ್ಸ್’ನಲ್ಲಿ ‘ಭಾರತ ಜೋಡೋ ಯಾತ್ರೆ ಭಾರತ ಜೋಡೋ ನ್ಯಾಯ ಯಾತ್ರೆ ಬಳಿಕ ರಾಹುಲ್‌ ಗಾಂಧಿ ಅವರು ‘ಇಂಡಿಯಾ’ ಒಕ್ಕೂಟದ ಸದಸ್ಯರೊಂದಿಗೆ ‘ಮತದಾರನ ಅಧಿಕಾರ ಯಾತ್ರೆ’ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಮತದಾರಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟ ಬಿಜೆಪಿಯ ಸಂಚಿನ ವಿರುದ್ಧ ಯಾತ್ರೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.