ADVERTISEMENT

ಎದುರಿಸಿದರೆ ಓಡುವ ಹೇಡಿ ಮೋದಿ: ರಾಹುಲ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 20:00 IST
Last Updated 7 ಫೆಬ್ರುವರಿ 2019, 20:00 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ರಾಜಕೀಯ ಪ್ರತಿಸ್ಪರ್ಧಿಗಳು ಸವಾಲು ಒಡ್ಡಿದರೆ ಓಡಿ ಹೋಗುವ ಹೇಡಿ ನರೇಂದ್ರ ಮೋದಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌, ಆರ್‌ಎಸ್‌ಎಸ್‌ ವಿರುದ್ಧವೂ ಹರಿಹಾಯ್ದರು. ಕಾಂಗ್ರೆಸ್ ಇತ್ತೀಚೆಗೆ ಅಧಿಕಾರಕ್ಕೆ ಏರಿದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದ ಆಡಳಿತ ವ್ಯವಸ್ಥೆಯಲ್ಲಿ ಸೇರಿಕೊಂಡಿರುವ ಆರ್‌ಎಸ್‌ಎಸ್‌ ಒಲವಿರುವವರನ್ನು ಹೊರಗೆ ಹಾಕುವುದಾಗಿ ಅವರು ಹೇಳಿದರು.

‘ನೀವು ಬರೆದಿಟ್ಟುಕೊಳ್ಳಿ, ಆರ್‌ಎಸ್‌ಎಸ್‌ ಅಥವಾ ನರೇಂದ್ರ ಮೋದಿ ಅಥವಾ ಸಾವರ್ಕರ್‌ ಯಾರೇ ಇರಲಿ, ಎಲ್ಲರೂ ಹೇಡಿಗಳು. ಅವರ ವಿರುದ್ಧ ನಾವು ಎದ್ದು ನಿಂತರೆ ಅವರು ಓಡಿ ಹೋಗುತ್ತಾರೆ’ ಎಂದು ಹೇಳಿದರು.

ADVERTISEMENT

‘ನೀವು ಸಿಂಹದ ಮರಿಗಳು, ಸಿಂಹದ ಮರಿಗಳು ಎದುರು ನಿಂತರೆ ಹೇಡಿಗಳು ಓಡುತ್ತಾರೆ. ನಾವು ಒಂದು ಇಂಚೂ ಹಿಂದಕ್ಕೆ ಹೋಗುವುದಿಲ್ಲ’ ಎಂದರು.

ದೋಕಲಾದಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಮುಖಾಮುಖಿಯಾದಾಗ ಪ್ರಧಾನಿ ಮೋದಿ ಅವರು ಯಾವುದೇ ಕಾರ್ಯಸೂಚಿ ಇಲ್ಲದೆ ಬೀಜಿಂಗ್‌ಗೆ ಹೋದರು. ಚೀನಾದ ನಾಯಕರ ಮುಂದೆ ಕೈಮುಗಿದು ನಿಂತರು. ಮೋದಿ ಅವರ ಎದೆ 56 ಇಂಚು ಬಿಡಿ, ನಾಲ್ಕು ಇಂಚೂ ಇಲ್ಲ ಎಂಬುದು ಚೀನಾದ ನಾಯಕರಿಗೆ ಅರಿವಾಯಿತು. ದೋಕಲಾ ವಿಚಾರದಲ್ಲಿ ಚೀನಾದ ಮುಂದೆ ಮೋದಿ ಮಂಡಿಯೂರಿದರು ಎಂದು ರಾಹುಲ್‌ ಆಪಾದಿಸಿದ್ದಾರೆ.

ಐದು ವರ್ಷ ಹಿಂದೆ ಮೋದಿ ಅವರಿಗೆ ಒಳ್ಳೆ ಹೆಸರಿತ್ತು. ಆದರೆ, ಈಗ ಜನ ಅವರನ್ನು ಕಳ್ಳ ಎಂದೇ ನೋಡುತ್ತಾರೆ. ಐದು ವರ್ಷ ಹಿಂದೆ ಮೋದಿ ಅವರು ‘ಅಚ್ಛೇ ದಿನ್’ ಎಂದಾಗ ಜನರು ‘ಮುಂದೆ ಬರಲಿವೆ’ ಎನ್ನುತ್ತಿದ್ದರು. ಆದರೆ, ಈಗ ಜನರು ಚೌಕೀದಾರ್‌ ಚೋರ್‌ ಹೇ ಎನ್ನುತ್ತಿದ್ದಾರೆ ಎಂದರು.

ನರೇಂದ್ರ ಮೋದಿ ಅವರ ಮುಖದಲ್ಲಿ ಈಗ ಭಯ ಮಾತ್ರ ಎದ್ದು ಕಾಣಿಸುತ್ತಿದೆ. ಜನರನ್ನು ವಿಭಜಿಸಿ ಆಡಳಿತದಲ್ಲಿರುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಅರಿವಾಗಿದೆ ಎಂದು ಹೇಳಿದರು.
**
ಐದು ವರ್ಷ ಹಿಂದೆ ಮೋದಿ ಅವರ ವರ್ಚಸ್ಸು ಚೆನ್ನಾಗಿತ್ತು ಎಂಬುದನ್ನು ಒಪ್ಪುವಿರಾ? ಮೋದಿ ಅವರು ಕಳ್ಳ ಎಂಬುದನ್ನು ಈಗ ನೀವು ಒಪ್ಪುವುದಿಲ್ಲವೇ? ಅವರಿಗೆ ಬಹಿರಂಗವಾಗಿ ಮಾತಡನಾಲೂ ಆಗುತ್ತಿಲ್ಲ
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ
**
ಇವನ್ನೂ ಓದಿ...
ನನ್ನೊಂದಿಗೆ 5 ನಿಮಿಷ ಚರ್ಚಿಸುವ ಧೈರ್ಯ ತೋರಿ: ಮೋದಿಗೆ ಸವಾಲೆಸೆದ ರಾಹುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.