ADVERTISEMENT

ಬಿಜೆಪಿ ವಿರುದ್ಧ ಪ್ರತಿ ಕ್ಷಣವೂ ಹೋರಾಟ: ಪಕ್ಷದ ಸಭೆಯಲ್ಲಿ ರಾಹುಲ್‌ ಪ್ರತಿಪಾದನೆ

ಚರ್ಚೆಗೆ ಬಾರದ ರಾಜೀನಾಮೆ ವಿಷಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:15 IST
Last Updated 1 ಜೂನ್ 2019, 20:15 IST
   

ನವದೆಹಲಿ: ‘ಕಾಂಗ್ರೆಸ್‌ನ 52 ಮಂದಿ ಮಾತ್ರ ಈ ಬಾರಿ ಲೋಕಸಭೆಗೆ ಆಯ್ಕೆ ಆಗಿರಬಹುದು. ಆದರೆ ಬಿಜೆಪಿಯನ್ನು ಎದುರಿಸುವ ಶಕ್ತಿ ಈ ಸಂಸದರಿಗೆ ಇದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಸಭೆಯಲ್ಲಿ ಅವರು ಮಾತನಾಡಿದರು.

‘ನಾವು 52 ಮಂದಿ ಇದ್ದೇವೆ. ಆದರೆ ಪ್ರತಿ ಹೆಜ್ಜೆಗೂ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಭರವಸೆ ನೀಡಬಲ್ಲೆ. ದೇಶದ ಪ್ರತಿಯೊಬ್ಬ ಪ್ರಜೆಯ ಮತ್ತು ಸಂವಿಧಾನದ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌ನ ಸಂಸದರು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ರಾಹುಲ್‌ ನುಡಿದರು.

ADVERTISEMENT

ಮೇ 24ರಂದು ನಡೆದ ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ಬಳಿಕ ರಾಹುಲ್‌ ಯಾವುದೇ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪಕ್ಷದ ಸೋಲಿನ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾರ್ಯಕಾರಿ ಸಮಿತಿಯು ಅದನ್ನು ತಿರಸ್ಕರಿಸಿದ್ದರೂ ರಾಹುಲ್‌ ತಮ್ಮ ನಿಲುವನ್ನು ಬದಲಿಸಿಲ್ಲ.

ಶನಿವಾರ ನಡೆದ ಸಭೆಯಲ್ಲಿ ರಾಹುಲ್‌ ರಾಜೀನಾಮೆಯ ವಿಚಾರ ಪ್ರಸ್ತಾಪವಾಗಿಲ್ಲದಿದ್ದರೂ ರಾಜೀನಾಮೆ ಹಿಂಪಡೆಯುವಂತೆ ಅನೇಕ ನಾಯಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಪ್ರತಿಪಕ್ಷ ನಾಯಕ ಸ್ಥಾನಕೇಳಲ್ಲ: ಕಾಂಗ್ರೆಸ್‌
‘ಲೋಕಸಭೆಯಲ್ಲಿ ನಮ್ಮ ಸಂಖ್ಯಾ ಬಲ ಕಡಿಮೆ ಇರುವುದರಿಂದ ನಾವು ಅಧಿಕೃತ ಪ್ರತಿಪಕ್ಷ ನಾಯಕನ ಸ್ಥಾನವನ್ನು ಕೇಳುವುದಿಲ್ಲ’ ಎಂದು ಕಾಂಗ್ರೆಸ್‌ ಶನಿವಾರ ಸ್ಪಷ್ಟಪಡಿಸಿದೆ.

ಸಂಪುಟದರ್ಜೆಯ ಸಚಿವ ಸ್ಥಾನಕ್ಕೆ ಸಮನಾದ ಪ್ರತಿಪಕ್ಷ ನಾಯಕ ಸ್ಥಾನ ಕೇಳಬೇಕಿದ್ದರೆ ಪಕ್ಷಕ್ಕೆ ಕನಿಷ್ಠ 54 ಸದಸ್ಯ ಬಲ ಇರಬೇಕು. ಕಾಂಗ್ರೆಸ್‌ಗೆ ಎರಡು ಸ್ಥಾನಗಳ ಕೊರತೆ ಇದೆ.

ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ಸಿಂಗ್‌ ಸುರ್ಜೇವಾಲ, ‘ಒಟ್ಟಾರೆ ಸದಸ್ಯರ (545) ಶೇ 10ರಷ್ಟು ಸ್ಥಾನಗಳನ್ನು ಪಡೆದವರಿಗೆ ಮಾತ್ರ ಈ ಹುದ್ದೆಯನ್ನು ಕೇಳುವ ಅಧಿಕಾರ ಇರುತ್ತದೆ. ನಮ್ಮಲ್ಲಿ ಸಂಖ್ಯಾ ಬಲ ಇಲ್ಲ. ಆದ್ದರಿಂದ ನಾವು ಆ ಬೇಡಿಕೆಯನ್ನೇ ಇಡುವುದಿಲ್ಲ’ ಎಂದಿದ್ದಾರೆ.

16ನೇ ಲೋಕಸಭೆಯಲ್ಲೂ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಯಾರಿಗೂ ಕೊಟ್ಟಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಸೋತಿರುವುದರಿಂದ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಯಾರಾಗಿರುತ್ತಾರೆ ಎಂಬ ಕುತೂಹಲ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.