ರಾಹುಲ್ ಗಾಂಧಿ
ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ 'ಭ್ರಷ್ಟ ಜನತಾ ಪಾರ್ಟಿ' ಎಂದು ಟೀಕಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು, ಭ್ರಷ್ಟಾಚಾರದಿಂದ ಕೂಡಿದ್ದು, ಅಧಿಕಾರ ದುರುಪಯೋಗವನ್ನು ಮಾಡುತ್ತಿದೆ. ದುರಹಂಕಾರದಿಂದ ಜನರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ ಭಂಡಾರಿ ಹತ್ಯೆ, ಉತ್ತರ ಪ್ರದೇಶದಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣ, ಇಂದೋರ್‌ನಲ್ಲಿ ಕಲುಪಿತ ನೀರು ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.
ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಜನರ ಸುಲಿಗೆ ಮಾಡುತ್ತಿದೆ. ಕೋಟ್ಯಧಿಪತಿಗಳಿಗಾಗಿ ಅರಾವಳಿ ಪರ್ವತ ಶ್ರೇಣಿಗಳನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೋಟ್ಯಧಿಪತಿಗಳಿಗಾಗಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಡಬಲ್ ಎಂಜಿನ್ ಸರ್ಕಾರ ನಡೆಯುತ್ತಿದೆ. ಜನ ಸಾಮಾನ್ಯರಿಗೆ ವಿನಾಶವನ್ನು ಒಡ್ಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.