ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇದು ಕೇವಲ ಒಬ್ಬ ವ್ಯಕ್ತಿಯ ಕೃತ್ಯವಲ್ಲ, ಬದಲಿಗೆ ಗೋಡ್ಸೆ ಕಾರ್ಖಾನೆಯ ಯೋಜನೆಯ ಭಾಗ ಎಂದು ಕಿಡಿಕಾರಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ತಾನು ಕರ್ಣಿ ಸೇನೆ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ, ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಓಂ ಬಿರ್ಲಾ ಅವರ ಕಚೇರಿಯಲ್ಲಿ ಕಾಂಗ್ರೆಸ್ ಸಂಸದರು ಗದ್ದಲ ಎಬ್ಬಿಸಿದರು ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಆರೋಪವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸೇರಿದಂತೆ 25 ಮಂದಿ ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಸಂಸದರ ನಡೆದುಕೊಂಡ ರೀತಿಯು ಬಿಜೆಪಿ ಮತ್ತು ಕರ್ಣಿ ಸೇನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಓಂ ಬಿರ್ಲಾ ಅವರ ಕಚೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 25 ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವ್ಯಕ್ತಿಯು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಓಂ ಬಿರ್ಲಾ ಫೋಟೊ ಇರುವ ಕೊಠಡಿಯಲ್ಲಿ ಕುಳಿತ ವ್ಯಕ್ತಿಯು, ಬಿಜೆಪಿ ಶಾಲು ಹಾಕಿಕೊಂಡು, ತಾನು ಕರ್ಣಿ ಸೇನೆಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.‘ಇಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ಆ ಸಂಸದರ ಮನೆಗಳಿಗೆ ನುಗ್ಗಿ ಅವರ ಮನೆಗಳನ್ನು ಧ್ವಂಸ ಮಾಡುತ್ತೇವೆ. ಈ ಘಟನೆ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಡೆದಿದೆ ಎಂದು ನಾನು ನಂಬುತ್ತೇನೆ. ರಾಹುಲ್ ಗಾಂಧಿ, ಎಚ್ಚರಿಕೆಯಿಂದ ಕೇಳಿ, ಅಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ನಿಮ್ಮ ಮನೆಗೆ ನುಗ್ಗಿ ನಿಮಗೆ ಗುಂಡು ಹಾರಿಸುತ್ತೇವೆ’ ಎಂದು ಹೇಳಿದ್ದಾರೆ.
‘ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಾವು ಆ ಸಂಸದರ ನಿವಾಸಗಳ ಮೇಲೆ ದಾಳಿ ಮಾಡುತ್ತೇವೆ. ಜೈಲಿಗೆ ಹೋಗುವ ಬಗ್ಗೆ ನಮಗೆ ಯಾವುದೇ ಹಿಂಜರಿಕೆ ಇಲ್ಲ. ಏನೇ ತಪ್ಪುಗಳು ಸಂಭವಿಸಿದರೂ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರು’ ಎಂದು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಆರ್‌ಎಸ್ಎಸ್-ಬಿಜೆಪಿಯು ಗೋಡ್ಲೆ ಕಾರ್ಖಾನೆಯಾಗಿದೆ. ರಾಹುಲ್ ಗಾಂಧಿ ಮತ್ತು 25 ಸಂಸತ್ ಸದಸ್ಯರ ವಿರುದ್ಧ ಕರ್ಣಿ ಸೇನೆ ನೀಡಿರುವ ಬೆದರಿಕೆಯು ಓರ್ವ ವ್ಯಕ್ತಿ ಮಾಡಿರುವುದಲ್ಲ. ಇದು ಖಚಿತ ಯೋಜನೆ ಭಾಗವಾಗಿದೆ’ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರಿಗೆ ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ ಆರೋಪಿಯನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.