ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ಪಟ್ನಾ: ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡುವ ಮೂಲಕ ರಾಹುಲ್ ಗಾಂಧಿ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿಯೇ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಕುರಿತಂತೆ ರಾಹುಲ್ ಗಾಂಧಿ ಆರೋಪಗಳನ್ನು ಅವರು ಅಲ್ಲಗಳೆದರು.
'ದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ. ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿಯೇ ಅವರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.
‘ಮತಗಳ್ಳತನ ಕುರಿತಂತೆ ಚುನಾವಣಾ ಆಯೋಗವನ್ನು ದೂರಿ ಗುರುವಾರ ರಾಹುಲ್ ಗಾಂಧಿ ಮಾಡಿದ್ದ ಎಕ್ಸ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯುವಕರು, ವಿದ್ಯಾರ್ಥಿಗಳು ಮತ್ತು ಜೆನ್ ಝೀಗಳು ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಲಿದ್ದಾರೆ. ಮತಗಳ್ಳತವನ್ನು ನಿಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಹಾಗಿದ್ದರೆ, ರಾಹುಲ್ ಗಾಂಧಿಯವರ ಮಾತಿನ ಅರ್ಥವೇನು? ದೇಶದಲ್ಲಿ ಹಿಂಸಾಚಾರವನ್ನು ಅವರು ಉತ್ತೇಜಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ’ಎಂದಿದ್ದಾರೆ.
ದೇಶದ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ನಿರಂತರವಾಗಿ ಸುಳ್ಳು ಮತ್ತು ದಾರಿತಪ್ಪಿಸುವ ಆರೋಪಗಳನ್ನು ಮಾಡುತ್ತಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕನ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಪ್ರಸಾದ್ ದೂರಿದ್ದಾರೆ
ರಾಹುಲ್ ಗಾಂಧಿಯವರು ಪದೇ ಪದೇ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದನ್ನು ನೋಡಿದರೆ ಭಾರತದ ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್ಸಿಗೆ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.
2023ರಲ್ಲಿ ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸುವ ಯತ್ನ ನಡೆದಿತ್ತು. ಸಿಐಡಿಗೆ ಅವರ ಮಾಹಿತಿ ನೀಡದೇ ಚುನಾವಣಾ ಆಯೋಗ ಕಲ್ಲಿನ ಗೋಡೆಯಂತೆ ಅವರನ್ನು ರಕ್ಷಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದರು.
ಆ ರೀತಿಯ ಆರೋಪಗಳನ್ನು ಮಾಡುವ ಮುನ್ನ ಹೋಮ್‌ವರ್ಕ್ ಮಾಡಿ ಎಂದು ನಾನು ರಾಹುಲ್ ಗಾಂಧಿಗೆ ಸಲಹೆ ನೀಡುತ್ತೇನೆ. 2023ರ ಮತಗಳ್ಳತನ ಯತ್ನದ ಕುರಿತಂತೆ ಈಗಾಗಲೇ ಕೂಲಂಕಷ ತನಿಖೆ ನಡೆಸಿರುವುದಾಗಿ ಆಯೋಗ ಸ್ಪಷ್ಟಪಡಿಸಿದೆ. ಅವರು ಈಗ ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಹಿಂದೆಯೇ ಆಯೋಗ ಉತ್ತರ ಕೊಟ್ಟಿದೆ ಎಂದಿದ್ದಾರೆ.
‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರ ಸರ್ಕಾರ ಏನು ಮಾಡುತ್ತಿದೆ? ಆಳಂದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಗಿದ್ದರೆ, ತಮ್ಮದೇ ಪಕ್ಷದ ಶಾಸಕನ ಆಯ್ಕೆಯನ್ನು ರಾಹುಲ್ ಪ್ರಶ್ನಿಸುತ್ತಿದ್ದಾರೆಯೇ? ಅದೇನೇ ಇದ್ದರೂ ಪ್ರಕರಣ ನ್ಯಾಯಾಲಯದಲ್ಲಿದೆ’ಎಂದು ಅವರು ಹೇಳಿದ್ದಾರೆ.
2014, 2019 ಮತ್ತು 2024ರಲ್ಲಿ ನಡೆದ ಲೋಕಸಭೆ ಚುನಾವಣೆಗಳನ್ನು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ ಭಾರತದ ಮತದಾರರ ಪ್ರಜಾಸತ್ತಾತ್ಮಕ ಆಯ್ಕೆಯನ್ನು ಅಣಕಿಸುತ್ತಿದ್ದಾರೆ. ಇದರ ಪರಿಣಾಮಗಳನ್ನು ಕಾಂಗ್ರೆಸ್ ನಾಯಕರು ಎದುರಿಸಬೇಕಾಗುತ್ತದೆ.. ನಾವು ಅವರಿಗೆ(ರಾಹುಲ್) ಮತ್ತು ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಸರಿಯಾದ ಉತ್ತರವನ್ನು ನೀಡುತ್ತೇವೆ.. ಮುಂಬರುವ ಚುನಾವಣೆಯಲ್ಲಿ ಅವರು ಅವಮಾನಕರ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಪ್ರಸಾದ್ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.