ADVERTISEMENT

ಮೋದಿ ವಿರುದ್ಧದ ದ್ವೇಷದಲ್ಲಿ ದೇಶಕ್ಕೆ ಹಾನಿ ಎಸಗುತ್ತಿರುವ ರಾಹುಲ್ ಗಾಂಧಿ: ಬಿಜೆಪಿ

ಪಿಟಿಐ
Published 21 ಮೇ 2022, 10:41 IST
Last Updated 21 ಮೇ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ವಿದೇಶದಲ್ಲಿದ್ದುಕೊಂಡು ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಅವರು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ಆಡಳಿತ ಪಕ್ಷವು ದೇಶದೆಲ್ಲೆಡೆ ಸೀಮೆಎಣ್ಣೆ ಹರಡಿದೆ. ಒಂದು ಕಿಡಿಯಷ್ಟೇ ಬೇಕಾಗಿರುವುದು, ನಾವು ದೊಡ್ಡ ಸಮಸ್ಯೆಗೆ ಸಿಲುಕಲಿದ್ದೇವೆ’ ಎಂದು ರಾಹುಲ್ ಗಾಂಧಿ ಲಂಡನ್‌ನ ಸಮಾವೇಶದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್ ಗಾಂದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘1984ರ ಸಿಖ್ ವಿರೋಧಿ ದಂಗೆಯನ್ನು ಪ್ರಚೋದಿಸಲು ಕಾಂಗ್ರೆಸ್ ಸೀಮೆಎಣ್ಣೆ ಒಯ್ದಿತ್ತು. ನಿರಾಶಾವಾದಿ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ, ಅರೆಕಾಲಿಕ, ವಿಫಲ ನಾಯಕ. ಅವರು ಅಮೆರಿಕ, ಬ್ರಿಟನ್‌, ಸಿಂಗಪುರಕ್ಕೆ ತೆರಳಿ ಭಾರತದ ವಿರುದ್ಧ ನಕಾರಾತ್ಮಕ ಮಾತುಗಳನ್ನು ಆಡುತ್ತಾರೆ’ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

‘ಅವರು (ರಾಹುಲ್) ಪದೇಪದೇ ಇಂಥ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದು ದೇಶಕ್ಕೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು’ ಎಂದು ಅವರು ಕಿಡಿ ಕಾರಿದ್ದಾರೆ.

ಲಂಡನ್‌ನಲ್ಲಿ ‘ಐಡಿಯಾಸ್ ಫಾರ್ ಇಂಡಿಯಾ ಕಾನ್‌ಕ್ಲೇವ್‌’ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಮತ್ತು ಆರ್‌ಎಸ್ಎಸ್ ಧ್ರುವೀಕರಣದ ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್ ಪಕ್ಷವು ಸಮಾನತೆಯಲ್ಲಿ ನಂಬಿಕೆ ಇರಿಸಿದೆ ಎಂದೂ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.