ಹೈದರಾಬಾದ್: ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಯಾತ್ರೆ ಈಗ ತೆಲಂಗಾಣದಲ್ಲಿ ಮುಂದುವರಿದಿದೆ. ಶನಿವಾರ ಧರ್ಮಪುರದಿಂದ ಯಾತ್ರೆ ಆರಂಭವಾಗಿದ್ದು, ರಾಹುಲ್ ಅಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಬುಡಕಟ್ಟು ನೃತ್ಯದಲ್ಲಿ ಪಾಲ್ಗೊಂಡರು.
ಬುಡಕಟ್ಟು ಸಮುದಾಯದ ಜನರು ಸಂಸದ ರಾಹುಲ್ ಅವರಿಗೆ ವಿಶಿಷ್ಟ ರುಮಾಲು ತೊಡಿಸಿ ಗೌರವಿಸಿದರು. ಬಳಿಕ, ಅವರ ಜೊತೆ ತೆಲಂಗಾಣದ ಭದ್ರಾಚಲಂನ ಆದಿವಾಸಿಗಳಪ್ರಾಚೀನ ನೃತ್ಯ ಪ್ರಾಕಾರ, ‘ಕೊಮ್ಮು ಕೋಯಾ’ಗೆ ರಾಹುಲ್ ಹೆಜ್ಜೆ ಹಾಕಿದರು.
ಈ ಬಗ್ಗೆ ವಿಡಿಯೊ ಟ್ವೀಟ್ ಮಾಡಿರುವ ಅವರು, ನಮ್ಮ ಆದಿವಾಸಿಗಳು ನಮ್ಮ ಕಾಲಾತೀತ ಸಂಸ್ಕೃತಿಗಳು ಮತ್ತು ವೈವಿಧ್ಯತೆಯ ಭಂಡಾರ. ಕೊಮ್ಮು ಕೋಯಾ ಬುಡಕಟ್ಟು ನೃತ್ಯಗಾರರ ಜೊತೆ ಹೆಜ್ಜೆ ಹಾಕಿದ್ದು ಸಂತಸ ತಂದಿದೆ. ಅವರ ಕಲೆ ಅವರ ಮೌಲ್ಯಗಳನ್ನು ವ್ಯಕ್ತಪಡಿಸುತ್ತದೆ, ಅದನ್ನು ನಾವು ಕಲಿತು ಸಂರಕ್ಷಿಸಬೇಕು ಎಂದು ಬರೆದುಕೊಂಡಿದ್ದಾರೆ.
ಮೂರು ದಿನಗಳ ದೀಪಾವಳಿ ವಿರಾಮದ ಬಳಿಕ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರ ಜೊತೆ ಡೋಲು ಬಾರಿಸುವ ಮೂಲಕ ರಾಹುಲ್ ಗಾಂಧಿ, ಶುಕ್ರವಾರ ಯಾತ್ರೆಗೆ ಮರುಚಾಲನೆ ನೀಡಿದ್ದರು.
ಬುಡಕಟ್ಟು ಜನಾಂಗದ ಸಂಗೀತಕ್ಕೆ ರಾಹುಲ್ ಗಾಂಧಿ ಈ ಹಿಂದೆಯೂ ಹಲವು ಬಾರಿ ಹೆಜ್ಜೆ ಹಾಕಿದ್ದರು. 2019ರಲ್ಲಿ ಛತ್ತೀಸ್‌ಗಡದ ರಾಯಪುರದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ಜನಾಂಗದ ಹಬ್ಬದಲ್ಲಿ ಭಾಗವಹಿಸಿದ್ದರು.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಯಾತ್ರೆ, ಅಕ್ಟೋಬರ್ 27ಕ್ಕೆ 50 ದಿನ ಪೂರೈಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.