ಪಿಟಿಐ
ನವದೆಹಲಿ: ‘ನಮ್ಮದು ವೈವಿಧ್ಯಮಯ ದೇಶ. ಇಲ್ಲಿ ಹಲವಾರು ಪರಂಪರೆಗಳಿವೆ. ಇವುಗಳು ಒಗ್ಗಟ್ಟಾಗಿ ಇರಬೇಕಾದುದು ನಮ್ಮ ದೇಶಕ್ಕೆ ಬಹಳ ಮುಖ್ಯವಾದುದು. ಚೀನಾದ ರೀತಿಯಲ್ಲಿ ಜನರನ್ನು ದಮನ ಮಾಡಿ, ಸರ್ವಾಧಿಕಾರಿ ವ್ಯವಸ್ಥೆ ನಡೆಸಲು ನಮಗೆ ಸಾಧ್ಯವಿಲ್ಲ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ದಕ್ಷಿಣ ಅಮೆರಿಕದ ನಾಲ್ಕು ವಿವಿಧ ದೇಶಗಳ ಪ್ರವಾಸದಲ್ಲಿರುವ ರಾಹುಲ್, ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
‘ನಾವು ಚೀನಾಕ್ಕಿಂತ ಭಿನ್ನವಾಗಿದ್ದೇವೆ. ನಮ್ಮ ದೇಶದ ಸಂರಚನೆಯು ಚೀನಾಕ್ಕಿಂತ ಭಿನ್ನವಾಗಿದೆ ಮತ್ತು ಹೆಚ್ಚು ಸಂಕೀರ್ಣವಾಗಿದೆ. ಚೀನಾಕ್ಕಿಂತ ನಮ್ಮ ಶಕ್ತಿಗಳೇ ಬೇರೆಯವು. ನಮ್ಮ ದೇಶದ ಸಂರಚನೆಯು ಹೇಗಿದೆಯೆಂದರೆ, ಚೀನಾದಂಥೆ ಸರ್ವಾಧಿಕಾರಿ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.
‘ಭಾರತದಲ್ಲಿ ಬಹಳ ಹಳೆಯ ಆಧ್ಯಾತ್ಮಿಕ ಪರಂಪರೆ ಇದೆ. ಇಂದಿನ ಜಗತ್ತಿಗೆ ಅಗತ್ಯವಾಗಿರುವ ಆಳವಾದ ವಿಚಾರಗಳಿರುವ ಒಂದು ಆಲೋಚನಾ ಕ್ರಮ ಇದೆ. ಪರಂಪರೆ ಮತ್ತು ಆಲೋಚನಾ ಕ್ರಮದ ವಿಚಾರದಲ್ಲಿ ನಾವು ಈ ಜಗತ್ತಿಗೆ ಕೊಡುಗೆ ನೀಡಬಹುದು’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ರಾಹುಲ್ ಅವರು ಕೊಲಂಬಿಯಾ ಅಧ್ಯಕ್ಷ ಸೆನೇಟ್ ಲಿಡಿಯೊ ಗ್ರಾಸಿಯಾ ಅವರನ್ನು ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.