ADVERTISEMENT

ಮೋದಿ ಸರ್ಕಾರಕ್ಕೆ ಯುವಜನರ ಭವಿಷ್ಯದ ಚಿಂತೆಯಿಲ್ಲ: ರಾಹುಲ್‌ ಗಾಂಧಿ

ಪಿಟಿಐ
Published 25 ಆಗಸ್ಟ್ 2025, 15:19 IST
Last Updated 25 ಆಗಸ್ಟ್ 2025, 15:19 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ‘ಮತ ಕಳವು ಮಾಡಿ ಅಧಿಕಾರಕ್ಕೇರಿರುವ ಮೋದಿ ಸರ್ಕಾರಕ್ಕೆ ದೇಶದ ಯುವಜನರ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ’ ಎಂದು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ಟೀಕಿಸಿದ್ದಾರೆ. 

ಇಲ್ಲಿನ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ‘ಸಿಬ್ಬಂದಿ ನೇಮಕಾತಿ ಆಯೋಗ’ದ (ಎಸ್‌ಎಸ್‌ಸಿ) ಆಕಾಂಕ್ಷಿಗಳ ಮೇಲೆ ನಡೆದಿದೆ ಎನ್ನಲಾದ ಲಾಠಿ ಪ್ರಹಾರವನ್ನು ಖಂಡಿಸಿ, ರಾಹುಲ್‌ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಆದರೆ, ಲಾಠಿ ಪ್ರಹಾರದ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. 

ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌, ‘ಎಸ್‌ಎಸ್‌ಸಿ ಆಕಾಂಕ್ಷಿಗಳ ಮೇಲಿನ ಲಾಠಿ ಪ್ರಹಾರವು ಸರ್ಕಾರದ ಹೇಡಿ ಕೃತ್ಯದ ಹಾಲ್‌ಮಾರ್ಕ್‌ ಆಗಿದೆ. ಉದ್ಯೋಗ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ ಯುವಕರ ಮೇಲೆ ದಾಳಿ ನಡೆಸಲಾಗಿದೆ. ಮೋದಿ ಸರ್ಕಾರಕ್ಕೆ ದೇಶದ ಯುವಜನರ ಭವಿಷ್ಯದ ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದಿದ್ದಾರೆ. 

ಅಲ್ಲದೇ, ‘ಈ ಸರ್ಕಾರವು ಜನರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿಲ್ಲ. ಮತಗಳನ್ನು ಕಳವು ಮಾಡಿ ಅಧಿಕಾರಕ್ಕೇರಿದೆ. ಮೊದಲಿಗೆ ನಿಮ್ಮ ಮತ ಕದಿಯುತ್ತಾರೆ, ನಂತರ ನಿಮ್ಮ ಪರೀಕ್ಷೆ, ಉದ್ಯೋಗ ಕೊನೆಗೆ ನಿಮ್ಮ ಹಕ್ಕು ಮತ್ತು ಧ್ವನಿ ಎರಡನ್ನೂ ಹತ್ತಿಕ್ಕುತ್ತಾರೆ’ ಎಂದೂ ರಾಹುಲ್‌ ಎಚ್ಚರಿಸಿದ್ದಾರೆ. 

‘ಯುವಜನರೇ, ರೈತರೇ, ಬಡಜನರೇ, ಬಹುಜನರೇ ಹಾಗೂ ಅಲ್ಪಸಂಖ್ಯಾತರೇ ಅವರಿಗೆ ನಿಮ್ಮ ಮತಗಳ ಅಗತ್ಯವಿಲ್ಲ ಹಾಗಾಗಿ ನಿಮ್ಮ ಬೇಡಿಕೆಗಳು ಎಂದಿಗೂ ಅವರಿಗೆ ಆದ್ಯತೆ ಆಗುವುದಿಲ್ಲ. ನೀವು ಹೆದರದೆ, ಎಚ್ಚೆತ್ತುಕೊಂಡು ಧೈರ್ಯವಾಗಿ ಹೋರಾಡಲು ಇದೇ ಸರಿಯಾದ ಸಮಯ’ ಎಂದೂ ರಾಹುಲ್‌ ಕರೆ ನೀಡಿದ್ದಾರೆ.

ಪ್ರತೀ ಪರಿಕ್ಷೆ ನೇಮಕಾತಿಗಳಲ್ಲೂ ವಂಚನೆ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗುತ್ತಿದೆ. ಬಿಜೆಪಿಯ ಈ ಭ್ರಷ್ಟಾಚಾರವು ಯುವಜನರ ಭವಿಷ್ಯ ಕಸಿಯುತ್ತಿದೆ
– ಪ್ರಿಯಾಂಕಾ ಗಾಂಧಿ ವಾದ್ರಾ ಸಂಸದೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಮಾಫಿಯಾ ಕೈಯಲ್ಲಿ ಅಧಿಕಾರ: ಖರ್ಗೆ

ಯುವಜನರ ಭವಿಷ್ಯವನ್ನು ಕಸಿಯುವುದು ಮೋದಿ ಸರ್ಕಾರದ ಚಾಳಿಯಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಎಸ್‌ಎಸ್‌ಸಿ ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಖಂಡಿಸಿರುವ ಅವರು ‘ಕಳೆದ 11 ವರ್ಷದಲ್ಲಿ ನೇಮಕಾತಿ ಪರೀಕ್ಷೆಗಳಿಂದ ಹಿಡಿದು ಉದ್ಯೋಗ ಪಡೆಯುವವರೆಗೆ ನಮ್ಮ ದೇಶದ ಯುವಕರ ಸಂಪೂರ್ಣ ಪ್ರಯಾಣವನ್ನು ಬಿಜೆಪಿ ಸರ್ಕಾರವು ಪತ್ರಿಕೆ ಸೋರಿಕೆ ಮಾಫಿಯಾಗಳ ಕೈಗೆ ಒಪ‍್ಪಿಸಿದೆ’ ಎಂದು ದೂರಿದ್ದಾರೆ. ಜತೆಗೆ ಬಿಜೆಪಿ ಮತ್ತು ಆರ್‌ಎಸ್ಎಸ್‌ ಸೇರಿ ಶಿಕ್ಷಣ ವ್ಯವಸ್ಥೆಯನ್ನೇ ನಾಶಗೊಳಿಸಿವೆ. ದೇಶದ ಯುವಜನರು ಕೆರಳಿದ್ದಾರೆ ಈ ಅನ್ಯಾಯವನ್ನು ಅವರು ಇನ್ನುಮುಂದೆ ಸಹಿಸುವುದಿಲ್ಲ ಎಂದೂ ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.