ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಹಿಂದೆ ಘೋಷಿಸಿದ ಉದ್ಯೋಗ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದು, ‘ಇದು ಕೂಡ ಮತ್ತೊಂದು ಜುಮ್ಲಾವೇ (ಸುಳ್ಳು)’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕಾಂಗ್ರೆಸ್ ನಾಯಕ ತನ್ನ ಅಜ್ಞಾನವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ’ ಎಂದು ತಿರುಗೇಟು ನೀಡಿದೆ.
ಮೋದಿ ಅವರನ್ನು ಉದ್ದೇಶಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನೀವು (ಮೋದಿ) ಪ್ರತಿ ದಿನವೂ ಹೊಸ ಘೋಷಣೆ ರಚಿಸುವುದರಲ್ಲಿ ತಲ್ಲೀನವಾಗಿದ್ದರೂ ಯುವಜನರು ಮಾತ್ರ ನಿಜವಾದ ಉದ್ಯೋಗ ಅವಕಾಶಗಳಿಗೆ ಇನ್ನೂ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಭಾರತಕ್ಕೆ ತುಂಬಾ ಅಗತ್ಯವಿರುವ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ನಿಮ್ಮ ದೃಢವಾದ ಯೋಜನೆ ಏನು? ಅಥವಾ ಇದು ಕೇವಲ ಮತ್ತೊಂದು ಜುಮ್ಲಾನಾ?’ ಎಂದು ರಾಹುಲ್ ಗಾಂಧಿ ಅವರು ಮೋದಿಯವರ ಕಾಲೆಳೆದಿದ್ದಾರೆ.
‘2024ರ ಚುನಾವಣೆಯ ನಂತರ, ಮೋದಿಯವರು ‘ಉದ್ಯೋಗ ಆಧಾರಿತ ಪ್ರೋತ್ಸಾಹ’ ಯೋಜನೆಯನ್ನು ಅತ್ಯಂತ ಸಂಭ್ರಮದಿಂದ ಘೋಷಿಸಿದರು. ನಮ್ಮ ಯುವಕರಿಗೆ ಉದ್ಯೋಗದ ಭರವಸೆ ನೀಡಿದರು. ಈ ಯೋಜನೆ ಘೋಷಿಸಿ ವರ್ಷ ಕಳೆದಿದೆ. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಅದಕ್ಕೆ ನಿಗದಿಪಡಿಸಿದ ₹10,000 ಕೋಟಿ ಹಣ ವಾಪಸ್ ಹೋಗಿದೆ. ಇದು ನಿರುದ್ಯೋಗ ನಿವಾರಣೆ ಬಗ್ಗೆ ಪ್ರಧಾನಿ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ರಾಹುಲ್ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಐ.ಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಒಂದೋ ರಾಹುಲ್ ಗಾಂಧಿಯವರ ತಂಡವು ಸತ್ಯಾಂಶಗಳನ್ನು ತಿಳಿಯುವಲ್ಲಿ ಸಂಪೂರ್ಣ ವಿಫಲವಾಗಿದೆ ಅಥವಾ ದೇಶದ ಯುವಕರನ್ನು ಭಯಬೀಳಿಸಲು ಅವರು ತಮ್ಮ ಟ್ರೇಡ್‌ಮಾರ್ಕ್ ಆಗಿರುವ ಅಜ್ಞಾನವನ್ನು ಅಸ್ತ್ರದಂತೆ ಝಳಪಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಮೋದಿ ಅವರ ನೇತೃತ್ವದ ಸರ್ಕಾರವು ಉತ್ಪಾದನೆ, ಸೇವಾ ಕ್ಷೇತ್ರ ಅಥವಾ ಕೃಷಿಯೇ ಆಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಿದೆ. ನೀವು (ರಾಹುಲ್) ಯುವ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದೀರಿ, ನಿಮ್ಮ ಸರ್ಕಾರವಿದ್ದಾಗ 2013ರಲ್ಲಿ ಯುವ ಉದ್ಯೋಗಾವಕಾಶವು ಕೇವಲ ಶೇ 34ರಷ್ಟಿತ್ತು. ಅದು 2024ರಲ್ಲಿ ಶೇ 55ಕ್ಕೆ ಏರಿದೆ. 2017-18ರಲ್ಲಿ ಶೇ 17.8 ರಷ್ಟಿದ್ದ ಯುವ ನಿರುದ್ಯೋಗ ಇಂದು ಶೇ 10.2ಕ್ಕೆ ಇಳಿದಿದೆ’ ಎಂದು ಮಾಳವಿಯಾ ತಿರುಗೇಟು ನೀಡಿದ್ದಾರೆ.
ಅದಾನಿ ಮತ್ತು ಅವರ ಬಿಲಿಯನೇರ್ ಸ್ನೇಹಿತರನ್ನು ಶ್ರೀಮಂತಗೊಳಿಸುವ ಬದಲು ಹಿಂದುಳಿದ ಸಮುದಾಯಗಳ ಯುವಕರಿಗೆ ಸಮಾನ ಉದ್ಯೋಗಾವಕಾಶವನ್ನು ಖಾತ್ರಿಪಡಿಸಲು ಪ್ರಧಾನಿಯವರು ಯಾವಾಗ ಗಮನ ಹರಿಸುತ್ತಾರೆ?ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ರಾಹುಲ್ ಗಾಂಧಿಯವರು ಯುವಕರನ್ನು ದಾರಿ ತಪ್ಪಿಸುವ ಬದಲು ತಮ್ಮದೇ ಸರ್ಕಾರ ಇದ್ದಾಗ ಅವರಿಗೆ ಭವಿಷ್ಯ ಕಲ್ಪಿಸಲು ಏಕೆ ವಿಫಲವಾಯಿತು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕುಅಮಿತ್ ಮಾಳವಿಯಾ ಬಿಜೆಪಿಯ ಐ.ಟಿ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.