ADVERTISEMENT

ಡಬ್ಲ್ಯುಇಎಫ್‌ ಭಾಷಣದಲ್ಲಿ ತೊಡಕು: ಪ್ರಧಾನಿ ಮೋದಿಗೆ ಕಾಂಗ್ರೆಸ್ ಲೇವಡಿ

ಪಿಟಿಐ
Published 18 ಜನವರಿ 2022, 20:30 IST
Last Updated 18 ಜನವರಿ 2022, 20:30 IST
ರಾಹುಲ್‌ ಗಾಂಧಿ– ನರೇಂದ್ರ ಮೋದಿ
ರಾಹುಲ್‌ ಗಾಂಧಿ– ನರೇಂದ್ರ ಮೋದಿ   

ನವದೆಹಲಿ: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ಕಾರ್ಯಸೂಚಿ ಭಾಷಣವನ್ನುಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಆರಂಭಿಸಿದ್ದನ್ನು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಲೇವಡಿ ಮಾಡಿದ್ದಾರೆ. ‘ಟೆಲಿಪ‍್ರಾಂಪ್ಟರ್‌ ಕೂಡ ಅಷ್ಟೊಂದು ಸುಳ್ಳುಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ’ ಎಂದು ರಾಹುಲ್‌ ಹೇಳಿದ್ಧಾರೆ. ಇದು ಡಬ್ಲ್ಯುಇಎಫ್‌ ಕಡೆಯಿಂದ ಆಗಿರುವ ತಾಂತ್ರಿಕ ಸಮಸ್ಯೆ ಎಂದು ಬಿಜೆಪಿ ಸಮಜಾಯಿಷಿ ನೀಡಿದೆ.

ಡಬ್ಲ್ಯುಇಎಫ್‌ನಲ್ಲಿ ನಡೆದ ಘಟನೆಯ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ದಾವೋಸ್‌ ಕಾರ್ಯಸೂಚಿ 2022 ಶೃಂಗಸಭೆಯಲ್ಲಿ ಮೋದಿ ಅವರು ತಮ್ಮ ಭಾಷಣ ಆರಂಭಿಸಿ ನಂತರ ನಿಲ್ಲಿಸಿದ್ದರು. ಬಳಿಕ, ಭಾಷಣ ಪುನರಾರಂಭಿಸಿದ್ದರು. ಹೀಗೆ ಆಗಲು ಟೆಲಿಪ್ರಾಂಪ್ಟರ್‌ನಲ್ಲಿ ಆಗಿದ್ದ ಎಡವಟ್ಟು ಕಾರಣ ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿದ್ದಾರೆ. ಸಭೆಯು ವರ್ಚುವಲ್‌ ಆಗಿ ನಡೆದಿತ್ತು.

ADVERTISEMENT

ಪ್ರಧಾನಿ ಅವರಿಗೆ ಟೆಲಿಪ್ರಾಂಪ್ಟರ್‌ ಸಮಸ್ಯೆ ಆಗಿರುವ ಸಾಧ್ಯತೆ ಇಲ್ಲ ಎಂದು ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಹೇಳಿದ್ದಾರೆ.

‘ಸರ್‌, ಎಲ್ಲರ ಸಂಪರ್ಕಗಳು ಸರಿಯಾಗಿದೆಯೇ ಎಂದು ಕೇಳಿಕೊಳ್ಳಿ’ ಎಂದು ಹೇಳುವ ಧ್ವನಿಯು ಪ್ರಧಾನಿ ಭಾಷಣದ ಧ್ವನಿಮುದ್ರಣದ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ಅದಾದ ಬಳಿಕ, ತಮ್ಮ ಮತ್ತು ಭಾಷಾಂತರಕಾರರ ಧ್ವನಿಯು ಸರಿಯಾಗಿ ಕೇಳಿಸುತ್ತಿದೆಯೇ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ. ‘ಸರಿಯಾಗಿ ಕೇಳಿಸುತ್ತಿದೆ’ ಎಂದು ಡಬ್ಲ್ಯು ಇಎಫ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್‌ ಶ್ವಾಬ್‌ ಅವರು ಪ್ರತಿಕ್ರಿಯಿಸುತ್ತಾರೆ.ಆದರೆ, ಶ್ವಾಬ್‌ ಅವರು ಮಧ್ಯಪ್ರವೇಶಿಸಿ ಮತ್ತೊಮ್ಮೆ ಪೀಠಿಕೆ ಭಾಷಣ ಮಾಡುತ್ತಾರೆ. ಪ್ರಧಾನಿಯವರು ತಮ್ಮ ಇಡೀ ಭಾಷಣವನ್ನು ಪುನರಾವರ್ತಿಸುತ್ತಾರೆ’ ಎಂದು ಸಿನ್ಹಾ ಅವರು ಪ್ರಧಾನಿಯ ಭಾಷಣದ ಸಂದರ್ಭವನ್ನು ವಿವರಿಸಿದ್ದಾರೆ. ಆದರೆ, ಕಾಂಗ್ರೆಸ್‌ನ ಹಲವು ಮುಖಂಡರು ಈ ಘಟನೆಯನ್ನು ಲೇವಡಿ ಮಾಡಿದ್ದಾರೆ.

‘ನೀವು ಟೆಲಿಪ್ರಾಂಪ್ಟರ್‌ ಇರಿಸಿ ಕೊಂಡು ಭಾಷಣ ಮಾಡಬಹುದು. ಆದರೆ, ದೇಶ ಆಳಲು ಸಾಧ್ಯವಿಲ್ಲ ಎಂಬುದು ನಿನ್ನೆಯ (ಸೋಮವಾರ) ಘಟನೆಯಿಂದ ಇಡೀ ದೇಶಕ್ಕೆ ತಿಳಿದಿದೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಪ್ರಧಾನಿಯು ಭಾಷಣ ನಿಲ್ಲಿಸಿ ಮತ್ತು ಆರಂಭಿಸಿದ ವಿಡಿಯೊವನ್ನು ಕಾಂಗ್ರೆಸ್ ಪಕ್ಷದ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅವರನ್ನು ‘ಟೆಲಿಪ್ರಾಂಪ್ಟರ್‌ ಆಸಾಮಿ’ ಎಂದು ಹೇಳಲಾಗಿದೆ.

‘ಟೆಲಿಪ್ರಾಂಪ್ಟರ್‌ ಕೆಲಸ ಮಾಡುವುದು ನಿಲ್ಲಿಸಿದಾಗ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಡಬ್ಲ್ಯುಇಎಫ್‌ನಲ್ಲಿ ದೇಶವನ್ನು ಪ್ರತಿನಿಧಿಸುವಲ್ಲಿ ಪ್ರಧಾನಿ ಮೋದಿ ವಿಫಲರಾದರು’ ಎಂದು ಯುವ ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.