'ಮೌಂಟೇನ್ ಮ್ಯಾನ್' ಖ್ಯಾತಿಯ ದಶರಥ ಮಾಂಝಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೃಪೆ: ಪಿಟಿಐ
ಪಟ್ನಾ: ಬಿಹಾರ ವಿಧಾನಸಭಾ ಚುನವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದರು. ಆದರೆ, ಬಳಿಕ ಟಿಕೆಟ್ ನಿರಾಕರಿಸಲಾಗಿದೆ ಎಂದು 'ಮೌಂಟೇನ್ ಮ್ಯಾನ್' ಖ್ಯಾತಿಯ ದಶರಥ ಮಾಂಝಿ ಪುತ್ರ ಭಗೀರಥ ಮಾಂಝಿ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಂಝಿ, 'ದೆಹಲಿಯಲ್ಲಿ ನಾಲ್ಕು ದಿನ ಉಳಿದುಕೊಂಡು, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೆ. ಆದಾಗ್ಯೂ ಟಿಕೆಟ್ ನಿರಾಕರಿಸಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ರಾಹುಲ್ ಅವರಲ್ಲಿ ಮನವಿ ಮಾಡಿದ್ದೆ. ಬಾರಾಛಟಿ ಅಥವಾ ಬೋಧ್ ಗಯಾದಿಂದ ಟಿಕೆಟ್ ನೀಡುವಂತೆ ಕೋರಿದ್ದೆ. ಅವರು ಭರವಸೆಯನ್ನೂ ನೀಡಿದ್ದರು. ಆದರೆ, ಅನಂತರ ಅದು ಸಾಧ್ಯವಾಗಿಲ್ಲ' ಎಂದು ಹೇಳಿದ್ದಾರೆ.
ಗಯಾದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಗೆಹ್ಲೌರ್‌ನಲ್ಲಿರುವ ದಶರಥ ಮಾಂಝಿ ಅವರ ಸಮಾಧಿ ಸ್ಥಳಕ್ಕೆ ಜೂನ್‌ನಲ್ಲಿ ಭೇಟಿ ನೀಡಿದ್ದ ರಾಹುಲ್, 'ಮೌಂಟೇನ್ ಮ್ಯಾನ್' ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದರು. ಅವರ ಕುಟುಂಬದವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದ ರಾಹುಲ್, ಕೆಲವು ದಿನಗಳ ಬಳಿಕ ಮನೆ ನಿರ್ಮಿಸಿಕೊಟ್ಟಿದ್ದರು.
ದಶರಥ ಅವರು, ಏಕಾಂಗಿಯಾಗಿ ಬೆಟ್ಟ ಕಡಿದು ರಸ್ತೆ ನಿರ್ಮಾಣ ಮಾಡಿದ್ದ ಗೆಹ್ಲೌರ್ ಗ್ರಾಮವು ಪ್ರಮುಖ ಪ್ರವಾಸಿ ತಾಣವಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷವನ್ನು ಕಳೆದ ವರ್ಷ ತೊರೆದಿದ್ದ ಭಗೀರಥ, ಕಾಂಗ್ರೆಸ್‌ಗೆ ಸೇರ್ಪಡೆಯಾದ ಕೆಲ ದಿನಗಳಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಾರ್ವಜನಿಕವಾಗಿ ಹೇಳಿದ್ದರು.
'ದಲಿತ ವಿರೋಧಿ ಮನಸ್ಥಿತಿ'
ಭಗೀರಥ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್, 'ಇದು ಕಾಂಗ್ರೆಸ್ ನಾಯಕರ, ಅದರಲ್ಲೂ ರಾಹುಲ್ ಗಾಂಧಿ ಅವರ ದಲಿತ ವಿರೋಧಿ ಮನಸ್ಥಿತಿಯನ್ನು ತೋರುತ್ತದೆ' ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.