ನವಾಡ (ಬಿಹಾರ): ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮಂತ್ರಿ ಗದ್ದುಗೆ ಏರಲಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಂಗಳವಾರ ಹೇಳಿದ್ದಾರೆ.
ನವಾಡಾದಲ್ಲಿ ನಡೆಯುತ್ತಿರುವ 'ಮತದಾರ ಅಧಿಕಾರ ಯಾತ್ರೆ' ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಳೆಯ ಹಾಗೂ ದುರ್ಬಲ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಯುವಕರು ದೃಢಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಯುವ ಪೀಳಿಗೆಗೆ ರಾಜ್ಯ ನಡೆಸಲು ಅವಕಾಶ ಸಿಗುವ ಸಮಯ ಬಂದಿದೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಕೆಳಗಿಸಬೇಕು. ಯುವಕರಿಗೆ ಅವಕಾಶ ಸಿಗಬೇಕು ಎಂದೂ ಯಾದವ್ ಹೇಳಿದ್ದಾರೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಒಂದು ಕಸರತ್ತು. ಇದೊಂದು ಕುತಂತ್ರವಾಗಿದೆ ಎಂದು ಯಾದವ್ ಕಿಡಿಕಾರಿದ್ದಾರೆ.
'ಮತದಾರರ ಅಧಿಕಾರ ಯಾತ್ರೆ'ಯು ಬಿಹಾರದ ಸಸಾರಾಮ್ನಿಂದ ಆರಂಭಗೊಂಡಿದೆ. ಈ ಯಾತ್ರೆಯು ಬಿಹಾರದಾದ್ಯಂತ 16 ದಿನಗಳು ನಡೆಯಲಿದೆ. 1,300 ಕಿ.ಮೀ ಸಾಗಲಿರುವ ಈ ಯಾತ್ರೆಯು ಸೆಪ್ಟೆಂಬರ್ 1ರಂದು ಪಟ್ನಾದಲ್ಲಿ ಸಮಾರೋಪಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.