ADVERTISEMENT

ಕೇರಳ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಹುಲ್‌ ಗಾಂಧಿ ಚಾಲನೆ

ಏಜೆನ್ಸೀಸ್
Published 24 ಜನವರಿ 2021, 7:32 IST
Last Updated 24 ಜನವರಿ 2021, 7:32 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ   

ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಭರದ ಸಿದ್ಧತೆ ನಡೆಸಿದ್ದು, ಜನವರಿ 27 ಹಾಗೂ 28ರಂದು ರಾಹುಲ್‌ ಗಾಂಧಿ ರಾಜ್ಯದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಕೇರಳದ ವಯನಾಡಿಗೆ ಎರಡು ದಿನಗಳ ಭೇಟಿ ನೀಡಲಿರುವ ರಾಹುಲ್‌ ಗಾಂಧಿ ಅಲ್ಲಿಂದಲ್ಲೇ ಮತಯಾಚನೆ ಅಭಿಯಾನವನ್ನು ಆರಂಭಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ತಿಳಿಸಿದೆ.

ಕೇರಳ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಅಧಿಕಾರಾವಧಿ ಮೇ 20ಕ್ಕೆ ಕೊನೆಗೊಳ್ಳಲಿದೆ.

ADVERTISEMENT

ತಮಿಳುನಾಡಿನಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡಿದ್ದ ರಾಹುಲ್‌, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

'ಪ್ರಸ್ತುತ ಭಾರತದಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಅದರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಮೋದಿಗೆ ಗೌರವವಿಲ್ಲ. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿ ಅವರ ಪರಿಕಲ್ಪನೆಗೆ ಅಧೀನವಾಗಿರಬೇಕೆಂದು ಮೋದಿ ಬಯಸುತ್ತಾರೆ. ತಮಿಳು, ಹಿಂದಿ, ಬಂಗಾಳಿ, ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆಗಳಿಗೆ ಈ ದೇಶದಲ್ಲಿ ಜಾಗವಿದೆ ಎಂಬುದಾಗಿ ನಾವು ನಂಬಿದ್ದೇವೆ' ಎಂದು ರಾಹುಲ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.