ADVERTISEMENT

ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:18 IST
Last Updated 24 ಮಾರ್ಚ್ 2023, 19:18 IST
   

ನವದೆಹಲಿ: ಎರಡು ವರ್ಷ ಜೈಲುಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಸದಸ್ಯತ್ವವನ್ನು ಅನರ್ಹಗೊಳಿಸುವುದರಿಂದ ರಕ್ಷಿಸಲು ಯುಪಿಎ–2 ಸರ್ಕಾರವು 2013ರಲ್ಲಿ ತರಲು ಹೊರಟಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನು ಸ್ವತಃ ರಾಹುಲ್‌ ಗಾಂಧಿ ಸಾರ್ವಜನಿಕವಾಗಿ ಹರಿದುಹಾಕಿದ್ದರು. ಆ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿದ್ದರು. ಈಗ ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ಘೋಷಣೆಯಾಗಿದೆ. ಕಾನೂನಿನ ಪ್ರಕಾರ, ಅವರ ಸದಸ್ಯತ್ವ ಅನರ್ಹವಾಗಿದೆ. ರಾಹುಲ್‌ ಅಂದು ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸದೇ ಇದ್ದು, ಅದು ಜಾರಿಯಾಗಿದ್ದಿದ್ದರೆ ಈಗ ರಾಹುಲ್‌ ಅವರ ಸದಸ್ಯತ್ವ ರದ್ದಾಗುತ್ತಿರಲಿಲ್ಲ.

‘ಚುನಾಯಿತ ಜನಪ್ರತಿನಿಧಿಗಳಾದ ಸಂಸದರು (ರಾಜ್ಯಸಭೆ ಸದಸ್ಯರೂ ಸೇರಿ) ಮತ್ತು ಶಾಸಕರಿಗೆ (ವಿಧಾನ ಪರಿಷತ್‌ ಸದಸ್ಯರೂ ಸೇರಿ) ಯಾವುದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ಎರಡು ವರ್ಷ ಶಿಕ್ಷೆಯಾದರೂ ತಕ್ಷಣವೇ ಅವರ ಸದಸ್ಯತ್ವ ಅನರ್ಹವಾಗುವುದಿಲ್ಲ. ಅನರ್ಹತೆ ಜಾರಿಗೆ ಮೂರು ತಿಂಗಳವರೆಗೆ ಸಮಯಾವಕಾಶವಿದೆ. ತಪ್ಪಿತಸ್ಥ ಎಂದು ಪ್ರಕಟವಾದ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಲು ಅವಕಾಶವಿದ್ದು, ತೀರ್ಪು
ಪ್ರಕಟವಾಗುವವರೆಗೂ ಅನರ್ಹತೆ ಜಾರಿಯಾಗುವುದಿಲ್ಲ’ ಎಂದು 1951 ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(4) ಹೇಳುತ್ತದೆ.

ಈ ಕಾಯ್ದೆಯ 8(4)ನೇ ಸೆಕ್ಷನ್‌ ನೀಡುವ ರಕ್ಷಣೆಯನ್ನು, ಲಿಲ್ಲಿ ಥಾಮಸ್‌ ಮತ್ತು ಲೋಕ ಪ್ರಹಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿಷ್ಕ್ರಿಯಗೊಳಿಸಿ 2013ರಲ್ಲಿ ಆದೇಶ ನೀಡಿತ್ತು. ‘ಶಿಕ್ಷೆ ಪ್ರಕಟವಾದ ಕೂಡಲೇ ಜನಪ್ರತಿನಿಧಿಗಳ ಸದಸ್ಯತ್ವ ಅನರ್ಹವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ADVERTISEMENT

ಯುಪಿಎ ಮಿತ್ರಪಕ್ಷಗಳಲ್ಲಿ ಒಂದಾಗಿದ್ದ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಅವರ ಸದಸ್ಯತ್ವ ಅನರ್ಹವಾಗಬೇಕಿತ್ತು. ಅದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಿಷ್ಕ್ರಿಯಗೊಳಿಸುವಂತಹ ಸುಗ್ರೀವಾಜ್ಞೆಯನ್ನು ಸರ್ಕಾರವು ತರಲು ಹೊರಟಿತ್ತು. ಸುಗ್ರೀವಾಜ್ಞೆಗೆ ರಾಷ್ಟ್ರಪತಿಯ ಅಂಕಿತವಷ್ಟೇ ಬೀಳಬೇಕಿತ್ತು. ಆ ಸಂದರ್ಭದಲ್ಲಿ ದೆಹಲಿ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್‌ ನಾಯಕರೊಂದಿಗೆ ನಡೆಯುತ್ತಿದ್ದ ಸಂವಾದಕ್ಕೆ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿದ್ದರು.

‘ಇಂತಹ ವಿಚಾರದಲ್ಲಿ ಸರ್ಕಾರ ಮಾಡಿದ್ದು ಸರಿಯಲ್ಲ. ಇದು ಶುದ್ಧ ಅಸಂಬದ್ಧ. ಇಂಥ ಸಣ್ಣ ವಿಷಯದಲ್ಲಿ ರಾಜಿಯಾದರೆ, ಮುಂದೆ ಎಲ್ಲಾ ವಿಷಯದಲ್ಲೂ ಬಾಗುತ್ತಲೇ ಹೋಗಬೇಕಾಗುತ್ತದೆ’ ಎಂದು ಹೇಳಿದ್ದರು. ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದುಹಾಕಿದ್ದರು. ನಂತರ ಸರ್ಕಾರವು ಸುಗ್ರೀವಾಜ್ಞೆಯನ್ನು ವಾಪಸ್‌ ಪಡೆದಿತ್ತು.

2013ರಲ್ಲಿ ರಾಹುಲ್‌ ಅವರ ಕಾರಣದಿಂದಲೇ ಉಳಿದುಕೊಂಡಿದ್ದ ಕಾನೂನು, ಈಗ ರಾಹುಲ್‌ ವಿರುದ್ಧವೇ ಬಳಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.