ತಿರುವನಂತಪುರ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರನ್ನು ತಿರುವನಂತಪುರದಲ್ಲಿರುವ ಅವರ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಭೇಟಿ ಮಾಡಿದ್ದಾರೆ.
ಇದು ಎ.ಕೆ. ಆ್ಯಂಟನಿ ಅವರ ಮನೆಗೆ ರಾಹುಲ್ ಗಾಂಧಿ ಅವರ ಸೌಜನ್ಯದ ಭೇಟಿಯಾಗಿದೆ.
ಎ.ಕೆ. ಆ್ಯಂಟನಿ ಅವರು 1970ರಿಂದಲೂ ಕೇರಳ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುತ್ತಿದ್ದರು. 1977, 1995 ಹಾಗೂ 2001ರಲ್ಲಿ ಕೇರಳ ಮುಖ್ಯಮಂತ್ರಿಯಾಗಿದ್ದರು. ನಂತರ ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು. 2022ರ ತನಕ ರಾಜ್ಯಸಭಾ ಸದಸ್ಯರಾಗಿದ್ದವರು, ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿ ಹೊಂದಿದ್ದಾರೆ.
‘ಬುಧವಾರವಷ್ಟೇ ಮೃತಪಟ್ಟಿದ್ದ ಕೇರಳದ ಪ್ರಮುಖ ಕಾಂಗ್ರೆಸ್ ನಾಯಕ ಸಿ.ವಿ. ಪದ್ಮರಾಜನ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಕೇರಳ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದು ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪುತುಪ್ಪಳ್ಳಿ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಎರಡನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕೂಡ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.