ADVERTISEMENT

‘ರಾಹುಲ್‌ಗೆ ಸಮರ್ಥರ ಕಂಡರೆ ಭಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:35 IST
Last Updated 24 ಮಾರ್ಚ್ 2019, 20:35 IST
   

ನವದೆಹಲಿ: ರಾಹುಲ್ ಗಾಂಧಿ ಅಸುರಕ್ಷಿತ ಭಾವ ಹೊಂದಿರುವ ನಾಯಕನಿರಬಹುದೇ? ರಾಹುಲ್ ತಮಗಿಂತಲೂ ಪ್ರತಿಭಾವಂತ ವ್ಯಕ್ತಿಗಳ ಸಾಮರ್ಥ್ಯದಿಂದ ಬೆದರಿದ್ದಾರೆಯೇ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.

ಜೇಟ್ಲಿ ಅವರು ಭಾನುವಾರ ಪ್ರಕಟಿಸಿರುವ ತಮ್ಮ ಫೇಸ್‌ಬುಕ್ ಬರಹದಲ್ಲಿ ಈ ಪ್ರಶ್ನೆ ಎತ್ತಿದ್ದಾರೆ.

‘ವಂಶಾಡಳಿತದ ಪಕ್ಷಗಳು ಕಾರ್ಯಕರ್ತರ ಮೇಲೆ ನಾಯಕನನ್ನು (ವಾರಸುದಾರ) ಹೇರುತ್ತವೆ. ಆ ನಾಯಕ ಸಮರ್ಥನಾಗಿದ್ದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ. ಆದರೆ ಆ ನಾಯಕ ದುರ್ಬಲ, ಅಸಮರ್ಥ ಮತ್ತು ವಾಸ್ತವವನ್ನು ಅರಿಯದವನಾಗಿದ್ದರೆ ಆ ಪಕ್ಷದ ಕಾರ್ಯಕರ್ತರು ತೀರಾ ಕಿರಿಕಿರಿ ಅನುಭವಿಸುತ್ತಾರೆ’ ಎಂದು ಜೇಟ್ಲಿ ತಮ್ಮ ಬರಹವನ್ನು ಆರಂಭಿಸಿದ್ದಾರೆ.

ADVERTISEMENT

‘ಸದ್ಯ ಕಾಂಗ್ರೆಸ್‌ನಲ್ಲೂ ಅಂಥದ್ದೇ ವಾತಾವರಣ ಇರುವಂತಿದೆ.‘ನಾನೇನು ಮಾಡೋದು? ಅವನು ನನ್ನ ಮಾತು ಕೇಳೋದಿಲ್ಲ’, ‘24ನೇ ಮೇವರೆಗೆ ಕಾಯಿರಿ, ನಂತರ ನಮ್ಮ ರಾಜಕಾರಣ ಶುರುವಾಗುತ್ತದೆ’, ‘ಬಿಟ್ಟುಹೋಗಬೇಕೆನಿಸುತ್ತಿದೆ’ ಎಂಬಂತಹ ಮಾತುಗಳು ಕಾಂಗ್ರೆಸ್‌ನಲ್ಲಿ ಚಾಲ್ತಿಗೆ ಬಂದಿವೆ. ವಂಶಾಡಳಿತ ಪಕ್ಷದ ಅಸಮರ್ಥ ತಲೆಮಾರು ಪಕ್ಷಕ್ಕೇನು ಮಾಡಬಹುದು ಎಂಬುದನ್ನು ಈ ಮಾತುಗಳು ಪ್ರತಿಬಿಂಬಿಸುತ್ತಿವೆ’ ಎಂದು ಜೇಟ್ಲಿ ಹೇಳಿದ್ದಾರೆ.

‘ಮೊದಲೇ ಹೇಳಿದಂತೆ ವಂಶಾಡಳಿತದ ಪಕ್ಷದಲ್ಲಿ ನಾಯಕನನ್ನು ಹೇರಲಾಗುತ್ತದೆ. ಹೀಗೆ ನಾಯಕರಾಗುವವರ ನಾಯಕತ್ವ ಅತ್ಯುತ್ತಮವಾಗಿರುವುದಿಲ್ಲ. ಕೆಲವರಂತೂ ‘ಡನ್ನಿಂಗ್–ಕ್ರುಗರ್ ಪರಿಣಾಮ’ದಿಂದ ಬಳಲುತ್ತಿರುತ್ತಾರೆ.ಡನ್ನಿಂಗ್–ಕ್ರುಗರ್ ಪರಿಣಾಮ ಎಂಬುದು ಮನೋವಿಜ್ಞಾನದ ಒಂದು ಪರಿಭಾಷೆ. ಈ ಪರಿಣಾಮದಿಂದ ಬಳಲುತ್ತಿರುವ ವ್ಯಕ್ತಿಗೆ, ಆತನ ದೌರ್ಬಲ್ಯದ ಅರಿವು ಇರುವುದಿಲ್ಲ. ಅಲ್ಲದೆ ಆತ ‘ಭ್ರಮಾ ಮೇಲರಿಮೆ’ ಅನುಭವಿಸುತ್ತಿರುತ್ತಾನೆ. ತಮ್ಮ ದೌರ್ಬಲ್ಯದ ಅರಿವು ಇಲ್ಲದ ಇಂತಹ ವ್ಯಕ್ತಿಗಳು, ಅತ್ಯಂತ ಸಮರ್ಥ ವ್ಯಕ್ತಿಗಳ ಸಾಮರ್ಥ್ಯವನ್ನೂ ಗ್ರಹಿಸುವುದಿಲ್ಲ’ ಎಂದು ಜೇಟ್ಲಿ ವಿವರಿಸಿದ್ದಾರೆ.

‘ಇಂತಹ ವ್ಯಕ್ತಿಗಳು ಸದಾ ಅಸುರಕ್ಷಿತ ಭಾವ ಹೊಂದಿರುತ್ತಾರೆ. ಇಂತಹ ಅಸಮರ್ಥರು ತಮಗಿಂತಲೂ ಹೆಚ್ಚು ಸಮರ್ಥರಾದ ವ್ಯಕ್ತಿಗಳ ವಿಚಾರದಲ್ಲಿ ಪಕ್ಷಪಾತದಿಂದ ವರ್ತಿಸುತ್ತಾರೆ.ವಂಶಾಡಳಿತ ಪಕ್ಷಗಳಲ್ಲಿ ಸಮರ್ಥ ವ್ಯಕ್ತಿ ನಾಯಕನಾಗುವ ಸಾಧ್ಯತೆ ಅತ್ಯಂತ ಕಡಿಮೆ. ಅಸುರಕ್ಷಿತ ಭಾವ ಹೊಂದಿರುವ ನಾಯಕ, ಸಮರ್ಥ ನಾಯಕರ ಬಗ್ಗೆ ಭಯ ಹೊಂದಿರುತ್ತಾನೆ’ ಎಂದು ಜೇಟ್ಲಿ ವಿವರಿಸಿದ್ದಾರೆ.

‘ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಡನ್ನಿಂಗ್–ಕ್ರುಗರ್ ಪರಿಣಾಮ ಕಾರಣವೇ? ಪ್ರಧಾನಿ ವಿರುದ್ಧ ಟೀಕೆ ಮಾಡುವಾಗ ಕಾಂಗ್ರೆಸ್‌ನ ಅಧ್ಯಕ್ಷ ಸಭ್ಯತೆ ಮತ್ತು ಘನತೆಯ ಗೆರೆ ದಾಟುವುದಕ್ಕೂ ಇದೇ ಕಾರಣವೇ’ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

*ವಂಶಾಡಳಿತದ ಪಕ್ಷಗಳು ಒಂದು ತಲೆಮಾರಿನ ನಾಯಕರ ಸಾಮರ್ಥ್ಯದಿಂದ ರಾರಾಜಿಸುತ್ತವೆ. ಆದರೆ ಮತ್ತೊಂದು ತಲೆಮಾರಿನ ನಾಯಕರಿಂದ ಕುಗ್ಗುತ್ತವೆ

- ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

* ಅರುಣ್ ಜೇಟ್ಲಿ ಅವರು ಒಬ್ಬ ವ್ಯಕ್ತಿಯನ್ನು ‘ಮಿದುಳೇ ಇಲ್ಲದ ಮನುಷ್ಯ’ ಎಂದು ಕರೆದಿದ್ದಾರೆ.ಪ್ರಾರ್ಥನೆ ಸಲ್ಲಿಸಲು ರಾಹುಲ್‌ ಗಾಂಧಿ ನಮಾಜ್ ಭಂಗಿಯಲ್ಲಿ ಕೂರುತ್ತಾರೆ

- ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ (ಚುನಾವಣಾ ಭಾಷಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.