ADVERTISEMENT

ರಾಹುಲ್‌ ಗಾಂಧಿ ನಾಯಕತ್ವದ ವಿರುದ್ಧ ಶರದ್‌ ಪವಾರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:53 IST
Last Updated 4 ಡಿಸೆಂಬರ್ 2020, 13:53 IST
ಎನ್‌ಸಿಪಿ ವರಿಷ್ಠ ಶರದ್‌ ಪವಾರ್
ಎನ್‌ಸಿಪಿ ವರಿಷ್ಠ ಶರದ್‌ ಪವಾರ್   

ಮುಂಬೈ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ವರಿಷ್ಠ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಾಯಕತ್ವವನ್ನು ಟೀಕಿಸಿದ್ದಾರೆ.

ಮಹಾ ವಿಕಾಸ ಅಘಾಡಿ ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಷ್ಟ್ರಮಟ್ಟದ ನಾಯಕನಾಗಿ ರಾಹುಲ್‌ ಅವರಲ್ಲಿ ಸ್ವಲ್ಪ ಸ್ಥಿರತೆಯ ಕೊರತೆ ಕಾಣಿಸುತ್ತಿದೆ. ಪಕ್ಷದೊಳಗೆ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅವರ ನಾಯಕತ್ವ ಅವಲಂಬಿಸಿರುತ್ತದೆ’ ಎಂದಿದ್ದಾರೆ.

‘ರಾಹುಲ್‌ ಅವರು ಅಧ್ಯಾಪಕರನ್ನು ಮೆಚ್ಚಿಸಲು ತುದಿಗಾಲಿನಲ್ಲಿ ನಿಂತಿರುವ ವಿದ್ಯಾರ್ಥಿಯಂತೆ ಕಾಣುತ್ತಾರೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ನಲ್ಲಿ ಟೀಕಿಸಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಪವಾರ್‌ ‘ಎಲ್ಲರ ದೃಷ್ಟಿಕೋನವನ್ನು ಒಪ್ಪಲೇಬೇಕೆಂದಿಲ್ಲ. ಬೇರೆ ದೇಶಗಳ ನಾಯಕರ ಕಾರ್ಯವೈಖರಿ ಬಗ್ಗೆ ನಾನೇನೂ ಮಾತನಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

ತಮ್ಮ ಮಗಳು ಸುಪ್ರಿಯಾ ಸುಳೆ, ಮಹಾರಾಷ್ಟ್ರದ ಮೊದಲ ಮಹಿಳಾ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ‘ರಾಷ್ಟ್ರಮಟ್ಟದಲ್ಲಿ ಸುಪ್ರಿಯಾಗೆ ಉನ್ನತ ಸ್ಥಾನಮಾನ ಸಿಕ್ಕಿದೆ. ರಾಷ್ಟ್ರ ರಾಜಕಾರಣದಲ್ಲೇ ಇರಬೇಕೆಂಬುದು ಆಕೆಯ ಬಯಕೆ. ಅಜಿತ್‌ ಪವಾರ್‌, ಜಯಂತ್‌ ಪಾಟೀಲ್‌ ಹಾಗೂ ಧನಂಜಯ ಮುಂಡೆ ಅವರಂತಹ ದಕ್ಷ ಆಡಳಿತಗಾರರು ರಾಜ್ಯದಲ್ಲಿದ್ದಾರೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.