ಪಟ್ನಾ/ಅರವಲ್/ಜೆಹನಾಬಾದ್/ದರ್ಬಾಂಗ್: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ವಿರೋಧಿಸಿ ಮಹಾಘಟಬಂಧನ ಮೈತ್ರಿಕೂಟವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಲ್ಲಿನ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಬೆಳಿಗ್ಗೆ ಬಿಹಾರಕ್ಕೆ ಆಗಮಿಸಿದರು. ನಂತರ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮತ್ತು ವಿರೋಧ ಪಕ್ಷಗಳ ಹಿರಿಯ ನಾಯಕರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪಟ್ನಾದ ಆದಾಯ ತೆರಿಗೆ ಕಚೇರಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಮಹಾಘಟಬಂಧನ ಮೈತ್ರಿಕೂಟವು ರಾಜ್ಯದಾದ್ಯಂತ ಬಂದ್‌ಗೆ ಕರೆನೀಡಿದ್ದರಿಂದ ವಿರೋಧ ಪಕ್ಷಗಳ ಕಾರ್ಯಕರ್ತರು ಹಲವು ಕಡೆಗಳಲ್ಲಿ ರಸ್ತೆ ಮತ್ತು ರೈಲು ತಡೆ ನಡೆಸಿದರು. ಮಹಾತ್ಮ ಗಾಂಧಿ ಸೇತು ಸಮೀಪ ಕಾರ್ಯಕರ್ತರು ರಸ್ತೆ ಮೇಲೆ ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು, ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದರು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಕಾರ್ಯಕರ್ತರೊಂದಿಗೆ ಸಚಿವಾಲಯ ಹಾಲ್ಟ್ ರೈಲು ನಿಲ್ದಾಣವನ್ನು ಪ್ರವೇಶಿಸಿ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಪ್ಪು ಯಾದವ್, ‘ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಮೂಲಕ ಚುನಾವಣಾ ಆಯೋಗವು ವಲಸಿಗರು, ದಲಿತರು ಮತ್ತು ಬಡವರ ಮತದಾನದ ಹಕ್ಕನ್ನು ಕಸಿಯುತ್ತಿದೆ’ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಸಂವಿಧಾನವನ್ನು ರಕ್ಷಿಸಬೇಕು. ಆದರೆ ಬಿಜೆಪಿಯ ನಿರ್ದೇಶನದಂತೆ ಅದು ಕೆಲಸ ಮಾಡುತ್ತಿದೆ. ಚುನಾವಣಾಧಿಕಾರಿಗಳನ್ನು ಬಿಜೆಪಿ ನೇಮಕ ಮಾಡುತ್ತಿದೆರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ನಡೆಸಿದ್ದರಿಂದ ನಾವು ಸೋತೆವು. ಆದರೆ ವಿರೋಧ ಪಕ್ಷಗಳು ಈಗ ಎಚ್ಚರಗೊಂಡಿವೆ. ಮತ್ತೆ ಇಂಥ ಅಕ್ರಮಕ್ಕೆ ಅವಕಾಶ ನೀಡಲ್ಲಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ
ಪ್ರತಿಭಟನೆ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹೇರಲು ವಿಪಕ್ಷಗಳು ಯತ್ನಿಸುತ್ತಿವೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಜುಲೈ 10ರಂದು ವಿಚಾರಣೆ ನಡೆಸಲಿದೆ. ಹಾಗಿದ್ದರೂ ಇಂದು ಪ್ರತಿಭಟನೆ ನಡೆಸಿದ್ದರ ಉದ್ದೇಶ ಏನು?ರವಿಶಂಕರ್ ಪ್ರಸಾದ್ ಬಿಜೆಪಿ ಹಿರಿಯ ನಾಯಕ
‘ಮಹಾ’ ರೀತಿ ಅಕ್ರಮಕ್ಕೆ ಅವಕಾಶ ನೀಡಲ್ಲ: ರಾಹುಲ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ‘ಅಕ್ರಮ’ ಎಸಗಲಾಗಿತ್ತು. ಈಗ ಬಿಹಾರ ಚುನಾವಣೆಯಲ್ಲೂ ಇಂಥದ್ದೇ ಅಕ್ರಮ ನಡೆಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದರು. ಪ್ರತಿಭಟನಾ ಮೆರವಣಿಗೆ ವೇಳೆ ‘ಇಂಡಿಯಾ’ ಮೈತ್ರಿಕೂಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಮತದಾರರ ಪಟ್ಟಿಯ ಪರಿಷ್ಕರಣೆಯು ‘ಮಹಾರಾಷ್ಟ್ರ ಮಾದರಿ’ಯ ವಿಸ್ತೃತ ರೂಪ. ಇದು ಮತದಾರರ ಹಕ್ಕು ಮಾತ್ರವಲ್ಲದೆ ಅವರ ಇಡೀ ಭವಿಷ್ಯವನ್ನೇ ಕಸಿದುಕೊಳ್ಳಲಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು. ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವ ಉದ್ದೇಶದಿಂದ ಈ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪರಿಷ್ಕರಣೆ ಪ್ರಶ್ನಿಸಿ ‘ಸುಪ್ರೀಂ’ನಲ್ಲಿ ಅರ್ಜಿ
ನವದೆಹಲಿ: ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಶ್ನಿಸಿ ಇಬ್ಬರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಜುಲೈ 10ರಂದು ಇತರ ಅರ್ಜಿಗಳೊಂದಿಗೆ ಈ ಅರ್ಜಿಗಳನ್ನೂ ವಿಚಾರಣೆ ನಡೆಸುವುದಾಗಿ ತಿಳಿಸಿತು. ಚುನಾವಣಾ ಆಯೋಗದ ಜೂನ್ 24ರ ಆದೇಶವನ್ನು ಪ್ರಶ್ನಿಸಿ ಅರ್ಷದ್ ಅಜ್ಮಲ್ ಮತ್ತು ರೂಪೇಶ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.