
ಇಂದೋರ್: ಕಲುಷಿತ ನೀರು ಕುಡಿದು ವಾಂತಿ, ಭೇದಿಯಿಂದ ಹಲವು ಮಂದಿ ಮೃತಪಟ್ಟು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧ್ಯಪ್ರದೇಶದ ಇಂದೋರ್‌ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.
ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 4 ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಕುಟುಂಬ ಸದಸ್ಯರನ್ನೂ ಭೇಟಿಯಾದರು.
ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೀತು ಪಟ್ವಾರಿ ಮತ್ತು ಪಕ್ಷದ ಮುಖಂಡ ಉಮಂಗ್ ಸಿಂಗಾರ್ ರಾಹುಲ್ ಜೊತೆಗಿದ್ದರು.
ಕಲುಷಿತ ನೀರಿನ ದುರಂತ ಸಂಭವಿಸಿದ ಭಗೀರಥಪುರ ಪ್ರದೇಶಕ್ಕೂ ಭೇಟಿ ನೀಡಿದ ರಾಹುಲ್, ಮೃತರ ಸಂಬಂಧಿಕರನ್ನು ಭೇಟಿಯಾಗಿ ಸಂತೈಸಿದರು.
ಕಲುಷಿತ ನೀರು ಸೇವನೆಯಿಂದ ವಾಂತಿ ಮತ್ತು ಭೇದಿ ಸಂಭವಿಸಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಭಗೀರಥಪುರದ ನಿವಾಸಿಗಳು ರಾಹುಲ್‌ಗೆ ತಿಳಿಸಿದ್ದಾರೆ. ಆದರೆ, ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಮಧ್ಯ ಪ್ರದೇಶ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ನಡುವೆ ಸರ್ಕಾರಿ ಸ್ವಾಮ್ಯದ ಮಹಾತ್ಮ ಗಾಂಧಿ ಮೆಮೊರಿಯಲ್ ಮೆಡಿಕಲ್ ಕಾಲೇಜಿನ ವೈದ್ಯರ ತಂಡ ನಡೆಸಿದ ಆಡಿಟ್‌ನಲ್ಲಿ 15 ಮಂದಿ ಮಾತ್ರ ವಾಂತಿ ಭೇದಿಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿತ್ತು.
ಮೃತರ ಕುಟುಂಬಗಳಿಗೆ ಸರ್ಕಾರ ತಲಾ ₹2 ಲಕ್ಷ ಪರಿಹಾರ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.